ಇನ್ನು ಚಿಕ್ಕ ವಯಸ್ಸಿನವರ ಹಾಗೆ ಕಾಣುವಂತೆ ಮಾಡುತ್ತೆ

ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಅತಿಯಾದ ಜಂಕ್ ಫುಡ್ ಇವುಗಳಿಂದಾಗಿ ನಮಗೆ ಇಪ್ಪತ್ತು ವರ್ಷಕ್ಕೆ ನಲವತ್ತು ವರ್ಷ ವಯಸ್ಸು ಆದಹಾಗೆ ಕಾಣಿಸುತ್ತದೆ. ಇದಕ್ಕೆ ಸೂಕ್ತವಾದ ರಸಾಯನ ಚಿಕಿತ್ಸೆಯ ಮೂಲಕ ನಾವು ಉಪಚಾರ ಮಾಡಿಕೊಂಡು ನಮಗೆ ವಯಸ್ಸು ಹೆಚ್ಚಾಗಿ ಕಾಣದೆ ಇರುವ ಹಾಗೆ ಮಾಡಿಕೊಳ್ಳಬಹುದು. ಹಾಗಿದ್ದರೆ ಆ ರಸಾಯನ ಚಿಕಿತ್ಸೆ ಏನಿರಬಹುದು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಆದರೆ ಅದಕ್ಕೂ ಮೊದಲು ಈ ರಸಾಯನ ಚಿಕಿತ್ಸೆಯ ಬಗ್ಗೆ ಸ್ವಲ್ಪ ಮಾಹಿತಿ ತಿಳಿದುಕೊಳ್ಳೋಣ. ಮಾನವಶರೀರವನ್ನು ಪಡೆದು ಜನಿಸಿದ ಪ್ರತಿ ವ್ಯಕ್ತಿಯ ಮೇಲೆ ದೇಹದ ಸ್ವಾಸ್ಥ್ಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯೂ ಇದೆ. ದೇಹವು ಹಳೆಯದಾಗುತ್ತ ಕಾಯಿಲೆಗಳ ತವರು ಆಗಬಾರದೆಂಬ ಸಂಕಲ್ಪ ತೊಟ್ಟವರಿಗೆಲ್ಲ ಇರುವ ಸ್ವಾಸ್ಥ್ಯ್ರದ ದಾರಿಯೇ ಆಯುರ್ವೆದ ವಿವರಿಸಿದ ರಸಾಯನ ಚಿಕಿತ್ಸೆ. ಈ ಚಿಕಿತ್ಸೆಯನ್ನು ಪಡೆದುಕೊಳ್ಳಲು ಚಿಕಿತ್ಸಾಲಯದಲ್ಲೇ ಉಳಿದುಕೊಂಡು ಮಾಡುವ ‘ಕುಟಿಪ್ರಾವೇಶಿಕ’ ಹಾಗೂ ಹೊರರೋಗಿಯಾಗಿ ಮನೆಗೆ ಹೋಗಿಬಂದು ಪಡೆದುಕೊಳ್ಳುವ ವಾತಾತಪಿಕ ಎಂಬ ಎರಡೂ ರೀತಿಯಲ್ಲಿ ವೈದ್ಯರ ನಿರ್ದೇಶನದಂತೆ ನಿರ್ವಹಣೆ ಮಾಡಲಾಗುತ್ತದೆ. ಚಿಕಿತ್ಸೆಯಲ್ಲಿ ಪ್ರಮುಖವಾಗಿ ಕಾಮ್ಯ ರಸಾಯನ, ನೈಮಿತ್ತಿಕ ರಸಾಯನ, ನಿತ್ಯ ರಸಾಯನವೆಂಬ ಮೂರು ವಿಧಗಳಿವೆ. ಕಾಮ್ಯ ರಸಾಯನವೆಂಬುದು ರೋಗನಾಶನ ಗುರಿಯನ್ನು ಹೊಂದಿದೆ. ಮೇಧಸ್ಸಿಗೆ ಹಾನಿಯಾಗಿ ಜ್ಞಾಪಕಶಕ್ತಿ, ಬುದ್ಧಿಶಕ್ತಿಗಳ ಬಲಹೀನವಾದಾಗ ಬ್ರಹ್ಮರಸಾಯನದಂತಹ ಔಷಧಗಳನ್ನು ನೀಡಿ ಮಾಡುವ ಚಿಕಿತ್ಸಾವಿಧಾನ ಇದಾಗಿದೆ.

ನೈಮಿತ್ತಿಕ ರಸಾಯನ ದೇಹವನ್ನು ಪುಷ್ಟಿಗೊಳಿಸುವ ಚಿಕಿತ್ಸಾ ವಿಧಾನ. ಇದನ್ನು ರೋಗಮುಕ್ತಿಯ ಕಾಲದಲ್ಲಿ ನೀಡಬೇಕಾಗಿರುತ್ತದೆ. ವ್ಯಕ್ತಿಯೋರ್ವ ಶ್ವಾಸಕೋಶದ ಕ್ಷಯರೋಗದಿಂದ ಬಳಲಿದಾಗ ಆರು ತಿಂಗಳೋ, ಒಂದು ವರ್ಷವೋ ನೀಡಲಾದ ಔಷಧ ಚಿಕಿತ್ಸೆಯಿಂದ ಗುಣವಾಗಿರುತ್ತದೆ. ಎಲ್ಲ ರೋಗತಪಾಸಣಾ ವರದಿಗಳೂ ಪ್ರಾಕೃತ ಸ್ಥಿತಿಯನ್ನೇ ಬಿಂಬಿಸುತ್ತವೆ. ಚಿಕಿತ್ಸಿಸಿದ ವೈದ್ಯರು ಎಲ್ಲವೂ ಸರಿಯಾಗಿದೆ, ಏನೂ ಬೇಡವೆಂದೇ ಹೇಳುತ್ತಾರೆ. ಆದರೂ ಆ ವ್ಯಕ್ತಿಗೆ ಏನೋ ಸುಸ್ತು, ಎಲ್ಲದರಲ್ಲೂ ನಿರುತ್ಸಾಹ, ಮೊದಲಿದ್ದ ಕ್ರಿಯಾಶೀಲತೆ ಇರುವುದಿಲ್ಲ. ಶರೀರ ಧಾತುಗಳನ್ನು ಪುಷ್ಟಿಗೊಳಿಸಿ ಮತ್ತೆ ಮೊದಲಿನ ಹುರುಪನ್ನು ತುಂಬಿಕೊಡಲು ನೈಮಿತ್ತಿಕ ರಸಾಯನ ಚಿಕಿತ್ಸೆಯೇ ದಾರಿ. ಚ್ಯವನಪ್ರಾಶ ಅವಲೇಹ, ತ್ರಿಫಲಾ ರಸಾಯನ, ಹರೀತಕೀ ರಸಾಯನ, ಶಿಲಾಜಿತು ರಸಾಯನಗಳೆಲ್ಲ ಇದೇ ಸಾಲಿನ ಪ್ರಮುಖ ಔಷಧಗಳು.

ಆಹಾರದಲ್ಲಿ ಸಾವಯವ ಒಣದ್ರಾಕ್ಷಿ ಹಾಗೂ ಖರ್ಜೂರ, ಔಷಧೀಯ ಸಸ್ಯಗಳಲ್ಲಿ ಬಲಾ, ಗುಗ್ಗುಲು, ಲಾಕ್ಷಾಗಳಂತಹ ದ್ರವ್ಯಗಳೂ ದೇಹವನ್ನು ಪುಷ್ಟಿಗೊಳಿಸಲು ಬಳಸಲ್ಪಡುತ್ತವೆ. ಅಜಸ್ರಿಕ ರಸಾಯನವೆಂದರೆ ಅದು ನಿತ್ಯ ರಸಾಯನ. ಪ್ರತಿನಿತ್ಯ ಕೆಲವೊಂದು ಆಹಾರಸೇವನಾ ಪದ್ಧತಿಯನ್ನು ಅಳವಡಿಸಿಕೊಳ್ಳುವುದರ ಮೂಲಕ ಶರೀರವನ್ನು ದೃಢಗೊಳಿಸುವ ವಿಧಾನಗಳಿವು. ಅನುದಿನವೂ ಕ್ಷೀರ ಹಾಗೂ ಘೃತ ಸೇವನೆಯ ಅಭ್ಯಾಸವು ಇದರಲ್ಲಿ ಮುಂಚೂಣಿಸ್ಥಾನದಲ್ಲಿದೆ. ಯಾವುದೋ ಚಾಕಲೇಟ್ ತಿನ್ನುವುದರ ಬದಲು ಬೆಟ್ಟದ ನೆಲ್ಲಿಕಾಯಿ ಲಭ್ಯವಿರುವ ಕಾಲದಲ್ಲಿ ಸೇವನೆ, ಹಾಗೂ ಅದು ಲಭ್ಯ ಇಲ್ಲದೆ ಇದ್ದಾಗ ಆಮಲಕಿ ಚೂರ್ಣ ಇದನ್ನು ತಂದುಕೊಂಡು ದಿನಕ್ಕೆ ಎರಡು ಬಾರಿ ಇದರ ಸೇವನೆ ಮಾಡಬೇಕು. ಬೆಟ್ಟದ ನೆಲ್ಲಿಕಾಯಿ ದೊರೆತರೆ ಅದರ ಸೇವನೆಯೇ ಬಹಳ ಉತ್ತಮ ಅದು ಸಿಗದೇ ಇದ್ದಲ್ಲಿ ಪರ್ಯಾಯ ವಿಧಾನ ಆಮಾಲಕಿ ಚುರ್ಣದ ಸೇವನೆ ಮಾಡುವುದು. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿನ ಜೊತೆಗೆ ಒಂದು ಚಮಚ ಆಮಲಕೀ ಚೂರ್ಣವನ್ನು ಮೂರು ತಿಂಗಳು ಇಲ್ಲವೇ ಆರು ತಿಂಗಳು ಅಥವಾ ಜೀವನ ಪರ್ಯಂತ ಸೇವಿಸುವುದರಿಂದ ವಯಸ್ಸು ಹೆಚ್ಚಾದಂತೆ ಅನ್ನಿಸುವುದಿಲ್ಲ. ಈ ರೀತಿಯ ಔಷಧ ಅಥವಾ ದ್ರವ್ಯಗಳನ್ನು ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಮತ್ತು ಋಷಿಮುನಿಗಳು ಬಳಕೆ ಮಾಡುತ್ತಿದ್ದರು. ಇದರ ಬಳಕೆಯಿಂದಲೇ ಹಿಂದಿನ ಕಾಲದಲ್ಲಿ ವಯಸ್ಸು ಹೆಚ್ಚು ಆದರೂ ಸುಂದರವಾಗಿಯೇ ಕಾಣುತ್ತಿದ್ದರು. ಅವರು ಪರಿಚಯಿಸಿದ ಈ ರಸಾಯನ ಚೂರ್ಣ ಆಮಲಕಿ ರಸಾಯನ ಚಿಕಿತ್ಸೆ ಎಂದೇ ಪ್ರಸಿದ್ಧಿ ಪಡೆದಿದೆ. ಇದನ್ನು ಬಳಸಿ ಪ್ರಯೋಜನ ಪಡೆದುಕೊಳ್ಳಿ.

Leave a Comment

error: Content is protected !!