ಬ್ಲಾಕ್ ಹೆಡ್ಸ್ ಸಮಸ್ಯೆ ನಿವಾರಣೆಗೆ ಉತ್ತಮ ಮನೆಮದ್ದು

ನಮ್ಮ ಮುಖದ ತ್ವಚೆ ಅತಿ ಸೂಕ್ಷ್ಮ ಅದರಲ್ಲೂ ನಮ್ಮ ದೇಹದಲ್ಲಿರುವ ಪಂಚೇಂದ್ರಿಯಗಳು ಇವುಗಳಿಗೆ ನಾವು ಹೆಚ್ಚಿನ ಕಾಳಜಿಯನ್ನು ನೀಡಬೇಕಾಗುತ್ತದೆ. ಅದರಲ್ಲಿ ಮೂಗು ಕೂಡಾ ಒಂದು. ಮೂಗಿನ ಪಕ್ಕದ ಭಾಗ ಮತ್ತು ಗಡ್ಡಗಳಲ್ಲಿ ಅತಿ ಹೆಚ್ಚು ಬ್ಲಾಕ್ ಹೆಡ್ಸ್ ಮೂಡುತ್ತವೆ. ಇವನ್ನು ಚಿವುಟಿ ತೆಗೆಯುವುದು ಸಾಧ್ಯವಿಲ್ಲ. ಬದಲಿಗೆ ಮೊಟ್ಟೆಯ ಬಿಳಿಭಾಗದ ಲೋಳೆಯನ್ನು ಬಳಸಿ ಬುಡದಿಂದ ನಿವಾರಿಸಬಹುದು. ಮೊಟ್ಟೆಯಿಂದ ಬ್ಲ್ಯಾಕ್ ಹೆಡ್ಸ್ ನಿವಾರಿಸಿಕೊಳ್ಳುವುದು ಹೇಗೆ? ಎನ್ನುವ ಮಾಹಿತಿ ಇಲ್ಲಿ ಈ ಲೇಖನದಲ್ಲಿ ಇದೆ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಹಂಚಿಕೊಳ

ಮೊಟ್ಟೆ ಅತ್ಯುತ್ತಮ ಅಹಾರ ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲಿಯೂ ಮೊಟ್ಟೆಯ ಬಿಳಿಯ ಭಾಗ ಹೆಚ್ಚು ಆರೋಗ್ಯಕರ ಮತ್ತು ಪೋಷಕಾಂಶಗಳಿಂದ ಕೂಡಿರುತ್ತದೆ ಇದು ತ್ವಚೆ ಮತ್ತು ಕೂದಲಿಗೆ ವಿಶೇಷವಾದ ಆರೈಕೆಯನ್ನು ನೀಡುತ್ತದೆ. ಇದೇ ಕಾರಣಕ್ಕೆ ಹಲವಾರು ಕೇಶ ಮತ್ತು ತ್ವಚೆಯ ಆರೈಕೆಯಲ್ಲಿ ಮೊಟ್ಟೆಯ ಬಿಳಿಭಾಗವನ್ನು ಬಳಸಲಾಗುತ್ತದೆ. ಆದರೆ ಈ ಬಿಳಿಭಾಗಕ್ಕೆ ಮೂಗಿನ ಮೇಲೆ ಇರುವ ಬ್ಲ್ಯಾಕ್‌ ಹೆಡ್ ಅಥವಾ ಕಪ್ಪು ಕಲೆಗಳನ್ನು ನಿವಾರಿಸುವ ಗುಣವೂ ಇದೆ. ಹೇಗೆ? ಎಂದು ನೋಡುವುದಾದರೆ, ಸುಲಭವಾಗಿ ಹೇಳಬೇಕೆಂದರೆ ಇದು ಅಂಟಂಟಾಗಿರುವ ಲೋಳೆಯಾಗಿದ್ದು ಮೂಗಿನ ರಂಧ್ರಗಳ ಒಳಗೆ ಇಳಿದು ಬ್ಲ್ಯಾಕ್‌ಹೆಡ್ ನಲ್ಲಿ ಸಂಗ್ರಹವಾಗಿದ್ದ ಕೊಳೆಯನ್ನು ಸಡಿಲಿಸಿ ಸುಲಭವಾಗಿ ಹೊರಬರುವಂತೆ ಮಾಡುತ್ತದೆ. ಆದರೆ ಇದು ಸಾಧ್ಯವಾಗಬೇಕಾದರೆ ಸೂಕ್ತ ಲೇಪದ ರೂಪದಲ್ಲಿ ಹಚ್ಚಿಕೊಂಡು ಸರಿಯಾದ ಕ್ರಮವನ್ನು ಅನುಸರಿಸಬೇಕಾಗುತ್ತದೆ. ಅದು ಹೇಗೆ ಅನ್ನೋದನ್ನು ನೋಡೋಣ.

ನೋಡಲು ಕಪ್ಪು ಚುಕ್ಕೆಗಳಂತಿರುವ ಈ ಬ್ಲ್ಯಾಕ್ ಹೆಡ್ಸ್ ಕೆಲವು ಚಿಕ್ಕ, ಕೆಲವು ಕೊಂಚ ಅಗಲ ಹೀಗೇ ಮೂಗು, ಮೂಗಿನ ಪಕ್ಕದ ಭಾಗ, ಹಣೆಯ ಮೇಲೆ, ಹುಬ್ಬುಗಳಲ್ಲಿ, ಗದ್ದದಲ್ಲಿ ಈ ಬ್ಲ್ಯಾಕ್‌ಹೆಡ್ ಗಳು ಮೂಡುತ್ತವೆ. ಸಹಜ ಸೌಂದರ್ಯವನ್ನು ಕುಂದಿಸುವ ಇವನ್ನು ಮೊದಲು ಚಿವುಟಿ ತೆಗೆಯಬೇಕು ಎನ್ನಿಸುತ್ತದೆ. ಹೆಚ್ಚಿನವರು ಹಾಗೆ ಮಾಡುತ್ತಾರೆ ಕೂಡಾ! ಆದರೆ ವಾಸ್ತವಲ್ಲಿ ಹೀಗೆ ಚಿವುಟುವುದರಿಂದ ಈ ಬ್ಲ್ಯಾಕ್‌ಹೆಡ್ ನ ತುದಿಯ ಕೊಂಚ ಭಾಗ ಹೋಗಬಹುದೇ ವಿನಃ ಒಳಗಿನ ಭಾಗ ಹಾಗೇ ಉಳಿದುಕೊಳ್ಳುತ್ತದೆ ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಿಲ್ಲ. ಮೂಗಿನ ಚರ್ಮ ಹೆಚ್ಚು ಸೆಳೆತಕ್ಕೆ ಒಳಗಾಗಿರುವ ಕಾರಣ ಅಲ್ಲಿನ ರಂಧ್ರಗಳು ಸ್ವಲ್ಪ ಅಗಲವಾಗಿರುತ್ತವೆ ಹಾಗಾಗಿ ಅಲ್ಲಿ ಸತ್ತ ಜೀವಕೋಶಗಳು, ಧೂಳು ಮತ್ತು ಕೊಳೆ ಸುಲಭವಾಗಿ ಸೇರಿಕೊಳ್ಳುತ್ತದೆ. ಹೀಗೇ ಸೇರಿಕೊಂಡು ರಂಧ್ರವನ್ನು ಮುಚ್ಚಿದಾಗ ಒಳಗಿನಿಂದಲೂ ಕಲ್ಮಶಗಳು ಸೇರಿಕೊಂಡು ಒಂದು ಮೊಳೆಯನ್ನು ಹೋಲುವ ಕಪ್ಪು ನೀಳ ಆಕಾರ ಪಡೆಯುತ್ತದೆ. ಚರ್ಮದ ತೈಲ ಹೊರಹೋಗಲು ಸಾಧ್ಯವಾಗದೇ ಈ ಕೊಳೆಯೊಂದಿಗೆ ಸೇರಿಕೊಳ್ಳುತ್ತದೆ. ಈ ಕೊಲೆಯನ್ನು ನಾವು ಚಿವುಟಿ ತೆಗೆಯಬಹುದು ಆದರೆ ನೀವು ಚಿವುಟಿ ತೆಗೆದ ಭಾಗ ಮತ್ತೆ ತುಂಬಿಕೊಳ್ಳಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಅಲ್ಲದೇ ಹೀಗೆ ಚಿವುಟುವಾಗ ಬೀಳುವ ಒತ್ತಡದಿಂದ ಚರ್ಮದ ಒಳಭಾಗದಲ್ಲಿ ಇನ್ನಷ್ಟು ತೈಲ ಸ್ರವಿಕೆಯಾಗುತ್ತದೆ ಹಾಗೂ ಈಗಾಗಲೇ ಇರುವ ಬ್ಯಾಕ್ಟೀರಿಯಾಗಳು ಇನ್ನಷ್ಟು ಹೆಚ್ಚಿಕೊಂಡು ಇನ್ನಷ್ಟು ಆಳಕ್ಕೆ ಸೋಂಕು ಹರಡಲು ಸಾಧ್ಯವಾಗುತ್ತದೆ.

ಕೆಲವೊಮ್ಮೆ ಈ ಸೋಂಕಿನ ಪರಿಣಾಮದಿಂದ ಮೂಗಿನ ಸೂಕ್ಷ್ಮ ಚರ್ಮ ಹರಿಯಲೂಬಹುದು. ಅಷ್ಟೇ ಅಲ್ಲ, ತಾಳ್ಮೆ ಕಳೆದುಕೊಂಡು ಆಳದಿಂದ ಚಿವುಟಿ ತೆಗೆಯುವ ಪ್ರಯತ್ನಗಳೂ ಚರ್ಮಕ್ಕೆ ಘಾಸಿಯುಂಟುಮಾಡಬಹುದು. ಆದ್ದರಿಂದ ಸ್ವಲ್ಪ ತಾಳ್ಮೆ ತೆಗೆದುಕೊಂಡು ನೈಸರ್ಗಿಕವಾಗಿ ಈ ತೊಂದರೆಗೆ ಸುಲಭ ಚಿಕಿತ್ಸೆಯನ್ನು ಅನುಸರಿಸುವ ಮೂಲಕ ಬ್ಲ್ಯಾಕ್‌ಹೆಡ್ ಗಳನ್ನೂ ಸುಲಭವಾಗಿ ಮತ್ತು ಯಾವುದೇ ಅಡ್ಡಪರಿಣಾಮಗಳಿಲ್ಲದೇ ನಿವಾರಿಸಬಹುದು. ​ಮೊಟ್ಟೆಯ ಬಿಳಿಭಾಗದ ಲೇಪ ಅಥವಾ ಮಾಸ್ಕ್ ತಯಾರಿಸುವ ಮತ್ತು ಬಳಸುವ ವಿಧಾನ: ಈ ಲೇಪವನ್ನು ತಯಾರಿಸಲು ಮೊದಲಾಗಿ ಹೆಸರೇ ತಿಳಿಸುವಂತೆ ಮೊಟ್ಟೆಯ ಬಿಳಿ ಮತ್ತು ಹಳದಿ ಭಾಗಗಳನ್ನು ಬೇರ್ಪಡಿಸಿಕೊಳ್ಳಬೇಕು. ಈ ಬಿಳಿಭಾಗವನ್ನು ಚೆನ್ನಾಗಿ ಗೊಟಾಯಿಸಿ ನೊರೆಯಾಗಿಸಬೇಕು. ಬಳಿಕ ಒಂದು ಮೊಟ್ಟೆಯ ಬಿಳಿಭಾಗಕ್ಕೆ ಒಂದು ಚಿಕ್ಕ ಚಮಚ ಲಿಂಬೆರಸ ಮತ್ತು ಒಂದು ಚಿಕ್ಕ ಚಮಚ ಜೇನುತುಪ್ಪವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.

ಇದನ್ನು ಬಳಸುವುದಕ್ಕೆ ಮೊದಲು ನಿಮ್ಮ ಮುಖವನ್ನು ಉಗುರು ಬೆಚ್ಚನೆಯ ನೀರಿನಲ್ಲಿ ತೊಳೆದುಕೊಳ್ಳಿ. ಬಳಿಕ ದಪ್ಪನೆಯ ಮತ್ತು ಸ್ವಚ್ಛವಾದ ಹತ್ತಿಯ ಟವೆಲ್ಲನ್ನು ಮುಖದ ಮೇಲೆ ಒತ್ತಿಕೊಳ್ಳಿ. ಒರೆಸಲು ಹೋಗದಿರಿ. ನಂತರ ಮಿಶ್ರಣ ಮಾಡಿಟ್ಟಿರುವ ಲೇಪನವನ್ನು ಹತ್ತಿಯ ಉಂಡೆ ಅಥವಾ ಫೇಸ್ ಬ್ರಶ್ ಬಳಸಿ ಬ್ಲ್ಯಾಕ್ ಹೆಡ್ ಗಳಿರುವಲ್ಲೆಲ್ಲಾ ದಪ್ಪನಾಗಿ ಹಚ್ಚಬೇಕು. ಈ ಲೇಪನ ಶೀಘ್ರವಾಗಿ ಒಣಗುವ ಕಾರಣ ಒಣಗಿದಂತೆಲ್ಲಾ ಅದರ ಮೇಲೆ ಇನ್ನಷ್ಟು ಹಚ್ಚಿ ಆದಷ್ಟೂ ದಪ್ಪನಾದ ಲೇಪ ಹಚ್ಚಿಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ಎರಡು ಪದರಗಳಾದರೂ ಬೇಕಾಗುತ್ತದೆ. ಬಳಿಕ ಸುಮಾರು 15-20 ನಿಮಿಷಗಳಾದರೂ ಹಾಗೇ ಒಣಗಲು ಬಿಡಬೇಕು. ನಂತರ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಅಥವಾ ಫೇಸ್ ವಾಶ್ ಯಾವುದೂ ಬಳಸುವುದುಬೇಡ. ಸಾಮಾನ್ಯವಾಗಿ ಮೊಟ್ಟೆಯ ಬಿಳಿಭಾಗದ ವಾಸನೆ ಸೋಪು ಇಲ್ಲದೇ ಹೋಗುವುದಿಲ್ಲ. ಇಲ್ಲಿ ಸೋಪು ಬಳಸಬಾರದು, ಹಾಗಾಗಿ ವಾಸನೆ ಹೋಗುವವರೆಗೂ ಹಲವಾರು ಬಾರಿ ತೊಳೆದುಕೊಳ್ಳಬೇಕಾಗುವುದು.

ಒಂದು ವೇಳೆ ಚರ್ಮ ಸೂಕ್ಷ್ಮ ಚರ್ಮ ಹೊಂದಿದವರಾಗಿದ್ದರೆ ಲಿಂಬೆರಸ ಸ್ವಲ್ಪ ಉರಿ ಎನಿಸಬಹುದು. ಅಂತವರು ಬರೀ ಮೊಟ್ಟೆಯ ಬಿಳಿಭಾಗವನ್ನಷ್ಟೇ ಚೆನ್ನಾಗಿ ಗೊಟಾಯಿಸಿ ಈ ಲೇಪವನ್ನು ಬಣ್ಣ ಬಳಿದಂತೆ ಬ್ಲ್ಯಾಕ್ ಹೆಡ್ ಗಳಿರುವಲ್ಲೆಲ್ಲಾ ಹಚ್ಚಿಕೊಳ್ಳಿ. ಈ ಭಾಗದ ಮೇಲೆ ಕಾಗದದ ಟವೆಲ್ ಅಥವಾ ಟಿಶ್ಯೂ ಒಂದನ್ನು ಇರಿಸಿ ಇದರ ಮೇಲೆ ಇನ್ನೊಂದು ಪದರ ಲೇಪಿಸಿ. ಸುಮಾರು ಅರ್ಧ ಘಂಟೆ ಹಾಗೇ ಇರಲು ಬಿಡಿ. ಬಳಿಕ ಸಿಪ್ಪೆ ಸುಲಿದಂತೆ ಈ ಲೇಪವನ್ನು ಎಳೆದು ನಿವಾರಿಸಿ. ಸುಮಾರಾಗಿ ಬ್ಲಾಕ್ ಹೆಡ್ ಗಳು ಈ ಪಟ್ಟಿಗೆ ಅಂಟಿಕೊಂಡು ಬರುತ್ತವೆ. ಇಲ್ಲದಿದ್ದರೆ ಈಗ ತಣ್ಣೀರಿನಿಂದ ತೊಳೆದುಕೊಂಡಾಗ ಸುಲಭವಾಗಿ ಕರಗಿ ಹೊರಬರುತ್ತವೆ. ನಿಮಗೆ ಮೊಟ್ಟೆ ಹಚ್ಚಿಕೊಳ್ಳಲು ಇಷ್ಟವಾಗದೇ ಇದ್ದರೆ ಅಥವಾ ಸಾಧ್ಯವಿಲ್ಲದಿದ್ದರೆ ಕೆಳಗಿನ ಪರ್ಯಾಯ ವಿಧಾನಗಳನ್ನೂ ಉಪಯೋಗಿಸಬಹುದು.

ನಿಂಬೆ ರಸ ಮತ್ತು ಜೇನುತುಪ್ಪದ ಲೇಪನ. ನಿಂಬೆ ಸಂಕೋಚಕ ಗುಣಗಳನ್ನು ಹೊಂದಿದೆ, ಇದು ಮುಚ್ಚಿಹೋಗಿರುವ ಸೂಕ್ಷ್ಮ ರಂಧ್ರಗಳನ್ನು ತೆರೆಯಲು ಮತ್ತು ನಿಮ್ಮ ಚರ್ಮದಿಂದ ಕೊಳಕು ಮತ್ತು ಸಂಗ್ರಹವಾಗಿದ್ದ ನೈಸರ್ಗಿಕ ತೈಲಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಿಂಬೆಹಣ್ಣಿನಲ್ಲಿರುವ ವಿಟಮಿನ್ ಸಿ ನಿಮ್ಮ ಚರ್ಮದ ಮೈಬಣ್ಣವನ್ನು ಬಿಳಿಚಿಸಿ ಸಹಜವರ್ಣ ಪಡೆಯಲು ಸಹಾಯ ಮಾಡುತ್ತದೆ. ಜೇನುತುಪ್ಪದಲ್ಲಿ ಬ್ಯಾಕ್ಟೀರಿಯಾ ನಿರೋಧಕ ಗುಣಗಳಿದ್ದು ಅದು ಬ್ಲ್ಯಾಕ್‌ಹೆಡ್‌ಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ನಿಂಬೆ ಮತ್ತು ಜೇನುತುಪ್ಪದ ಲೇಪನವೂ ಉತ್ತಮ ಸಹಾಯಕಾರಿ ಆಗಿದ್ದು ಇದನ್ನು ಬಳಸುವ ವಿಧಾನ ಈ ರೀತಿ ಆಗಿದೆ. ಒಂದು ಚಿಕ್ಕ ಚಮಚ ನಿಂಬೆ ರಸ ಮತ್ತು ಅರ್ಧ ಚಮಚ ಜೇನುತುಪ್ಪವನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಮೂಗಿನ ಮೇಲೆ ಬ್ಲ್ಯಾಕ್ ಹೆಡ್ ಗಳಿರುವ ಜಾಗದಲ್ಲಿ ಹಚ್ಚಿ ಸುಮಾರು 15 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ಅದನ್ನು ಕೇವಲ ತಣ್ಣೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ 3-4 ಬಾರಿಯಾದರೂ ಈ ರೀತಿಯಾಗಿ ಮಾಡಲೇಬೇಕು.

​ಬೇಕಿಂಗ್ ಸೋಡಾ ಮತ್ತು ನಿಂಬೆರಸದ ಲೇಪನ ಇದೂ ಕೂಡಾ ಬ್ಲ್ಯಾಕ್ ಹೆಡ್ಸ್ ನಿವಾರಣೆ ಮಾಡಲು ಸಹಾಯಕಾರಿ ಆಗುತ್ತದೆ. ಇದನ್ನು ಬಳಸುವ ವಿಧಾನ ಈ ರೀತಿಯಾಗಿದೆ. ಅರ್ಧ ಚಮಚ ನಿಂಬೆ ರಸದೊಂದಿಗೆ ಒಂದು ಚಿಕ್ಕ ಚಮಚ ಅಡಿಗೆ ಸೋಡಾ ಮಿಶ್ರಣ ಮಾಡಿಕೊಳ್ಳಬೇಕು. ಈ ಲೇಪವನ್ನು ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡು ಒತ್ತಿ ಒರೆಸಿಕೊಂಡಿದ್ದ ಮೂಗಿನ ಭಾಗದ ಮೇಲೆ ಹಚ್ಚಿ ಬ್ಲ್ಯಾಕ್ ಹೆಡ್ ಇರುವಲ್ಲಿ ಹೆಚ್ಚು ದಪ್ಪನಾಗಿ ಹಚ್ಚಬೇಕು. ಬಳಿಕ ಸುಮಾರು ಹದಿನೈದು ನಿಮಿಷ ಹಾಗೇ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಮುಖ ತೊಳೆಯುವಾಗ ಸೋಪನ್ನು ಮಾತ್ರ ಬಳಕೆ ಮಾಡಲೇಬಾರದು.

Leave a Comment

error: Content is protected !!