ಮೂರು ದಶಕಗಳ ಕಾಲ ಗಂಡಾಗಿ ಬದುಕಿದ ಹೆಣ್ಣು; ಇದರ ಹಿಂದಿನ ಕಾರಣ ಕೇಳಿದರೆ ಅಚ್ಚರಿ ಪಡುತ್ತೀರಿ

ಮನುಷ್ಯ ಜೀವನವನ್ನ ಸಾಗಿಸುವುದಕ್ಕಾಗಿ ಯಾವೆಲ್ಲಾ ಮಾರ್ಗವನ್ನು ಅನುಸರಿಸಬೇಕಾಗುತ್ತದೆ, ಯಾವೆಲ್ಲಾ ವೇಷಗಳನ್ನು ಧರಿಸಬೇಕಾಗುತ್ತದೆ ಹೇಳುವುದೇ ಕಷ್ಟ. ತನಗಾಗಿ ತನ್ನ ಕುಟುಂಬದವರಿಗಾಗಿ ಕೆಲವರಂತೂ ಪಡಬಾರದ ಕಷ್ಟ ಪಡುತ್ತಾರೆ. ಹೊತ್ತು ಕೂಳಿಗಾಗಿಯೂ ಪರದಾಡುವವರಿದ್ದಾರೆ. ಮರ್ಯಾದೆಗಾಗಿ ಅಂಜಿ ಬದುಕುವವರಿದ್ದಾರೆ. ಹೀಗೆ ಜೀವನವನ್ನ ಸವೆಸುವವರ ನಡುವೆ ಈಕೆಯದು ನಿಜವಾಗಿಯೂ ಸ್ಪೂರ್ತಿದಾಯಕ ಕಥೆ, ರೋಚಕ ಕಥೆ. ಇದನ್ನು ಕೇಳಿದ್ರೆ ನೀವು ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುತ್ತೀರಿ. ಬನ್ನಿ ಆ ರೋಚಕ ಕಥೆಯನ್ನ ನಾವಿಲ್ಲಿ ತಿಳಿಸುತ್ತೇವೆ.

ಆಕೆಯ ನಿಜವಾದ ಹೆಸರು ಪೇಚಿಯಮ್ಮಾಳ್. ಆಕೆ ತಮಿಳುನಾಡಿನ ತೂತುಕುಡಿ ಜಿಲ್ಲೆಯ ನಿವಾಸಿ. ತನ್ನ ಮಗಳನ್ನು ಸಾಕುವುದಕ್ಕಾಗಿ, ಅವಳಿಗೆ ಉತ್ತಮ ಭವಿಷ್ಯವನ್ನು ಕಲ್ಪಿಸಿಕೊಳ್ಳುವುದಕ್ಕೆ ಆಕೆ ಪಟ್ಟ ಶ್ರಮದ ಬಗ್ಗೆ ಕೇಳಿದ್ರೆ ನೀವು ನಿಜಕ್ಕೂ ಆಶ್ಚರ್ಯ ಪಡ್ತೀರಿ. ಹೌದು ಪೇಚಿಯಮ್ಮಾಳ್ ಒಬ್ಬ ಮಗಳ ತಾಯಿ. ತಮಿಳುನಾಡಿನ ತೂತುಕುಡಿಯ ಕಾಟುನಾಯಕನಪಟ್ಟಿ ಗ್ರಾಮದಲ್ಲಿ 30 ವರ್ಷಗಳ ಹಿಂದೆ ಪೇಚಿಯಮ್ಮಾಳ್ ಅವರಿಗೆ ಮದುವೆಯಾಗುತೆ. ಆಗ ಆಕೆಗೆ ಕೆವಲ 20 ವರ್ಷ. ದುರದೃಷ್ಟವಶಾತ್ ಆಕೆಯ ಗಂಡ ಮದುವೆಯಾಗಿ ಕೆಲವೇ ದಿನಗಳಲ್ಲಿ ತೀರಿಕೊಳ್ಳುತ್ತಾನೆ.

ಪೇಚಿಯಮ್ಮಾಳ್ ಳ ಗಂಡ ಸಾಯುವಾಗ ಆಕೆ ಗರ್ಭಿಣಿ. ಗಂಡನಿಲ್ಲದೇ, ಮಗುವನ್ನು ಹೊಟ್ಟೆಯಲ್ಲಿ ಹೊತ್ತುಕೊಂಡು ಆಕೆ ಪಟ್ಟ ಪಾಡು ಯಾರಿಗೂ ಬೇಡ. ಹೇಗೋ ಕಷ್ಟಪಟ್ಟು ತನ್ನ ಮಗುವಿಗಾಗಿ ಬದುಕಬೇಕು ಎಂದು ಪೇಚಿಯಮ್ಮಾಳ್ ನಿರ್ಧರಿಸುತ್ತಾಳೆ. ಅಂತೆಯೇ ಹೆಣ್ಣು ಮಗಳ ಜನನವಾದಾಗ ಅವಳನ್ನು ಸುರಕ್ಷಿತವಾಗಿ ಬೆಳೆಸಬೇಕು. ಅವಳನ್ನು ಚೆನ್ನಾಗಿ ಬೆಳೆಸಬೇಕು ಎನ್ನುವ ಕಾರಣಕ್ಕೆ ಕೆಲಸ ಹುಡುಕಿಕೊಂಡು ಹೊರಡುತ್ತಾಳೆ. ಆದರೆ ಆಗಿನ್ನೂ ಪೇಚಿಯಮ್ಮಾಳ್ ಸಣ್ಣ ವಯಸ್ಸಿನವಳು. ಊರಿನ ಕೆಟ್ಟ ಗಂಡಸರ ಕಣ್ಣು ಅವಳ ಮೇಲೆ ಬಿತ್ತು. ಕೆಲಸ ಕೇಳಿದ ಕಡೆಯಲ್ಲೆಲ್ಲಾ, ಕೆಲಸದ ಬದಲು ಕಿರುಕುಳವನ್ನು ಕೊಟ್ಟರು. ಕೆಟ್ಟದಾಗಿ ನಡೆಸಿಕೊಂಡರು. ಆಗ ಪೇಚಿಯಮ್ಮಾಳ್ ಒಂದು ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾಳೆ! ಏನು ಗೊತ್ತಾ?

ಗಂಡಸಿನಂತೆ ತನ್ನ ಕೂದಲನ್ನು ಕತ್ತರಿಸಿಕೊಂಡು ಅಂಗಿ ಲುಂಗಿ ಸುತ್ತಿಕೊಂಡು ಥೇಟ್ ಗಂಡಸಿನಂತೆ ಸಿದ್ಧವಾಗುತ್ತಾಳೆ. ಇದು ಒಂದು ದಿನಕ್ಕಲ್ಲ. ಬರೋಬ್ಬರಿ 30 ವರ್ಷಗಳ ಕಾಲ, ಗಂಡಸಿನ ರೂಪದಲ್ಲಿ ಬದುಕುತ್ತಾಳೆ. ತನ್ನ ಹೆಸರನ್ನು ಮುತ್ತು ಎಂದು ಬದಲಾಯಿಸಿಕೊಂಡು, ಮಗಳಿಗೆ ತಂದೆಯಂತೆ ಬದುಕುತ್ತಾಳೆ. ಎಂಥ ಸಾಹಸ ನೋಡಿ. ’ತಾನು ಕೆಲಸಕ್ಕೆ ಬೇರೆ ಬೇರೆ ಊರುಗಳಿಗೆ ಪ್ರಯಾಣಿಸುತ್ತಿದ್ದೆ. ಆಗೆಲ್ಲ ಗಂಡಸಿನ ವೇಷದಲ್ಲಿದ್ದಿದ್ದಕ್ಕೆ ಪ್ರಯಾಣ ಸುಲಭವಾಗುತ್ತಿತ್ತು. ಮಹಿಳೆಯರಿಗೆ ಬಸ್ ಗಳಲ್ಲಿ ಮೀಸಲಾತಿ ಇದ್ದರೂ ನಾನು ಗಂಡಸರ ಸೀಟ್ ನಲ್ಲಿ ಕೂರುತ್ತಿದ್ದೆ, ಗಂಡಸರಂತೆ ಟಿಕೇಟ್ ಹಣ ಕೊಟ್ಟು ಖರೀದಿಸುತ್ತಿದ್ದೆ ಎನ್ನುತ್ತಾರೆ ಪೇಚಿಯಮ್ಮಾಳ್ ಅಲಿಯಾಸ್ ಮುತ್ತು.

ಪೇಚಿಯಮ್ಮಾಳ್ ತನ್ನ ಎಲ್ಲಾ ದಾಖಲೆಗಳಲ್ಲಿ ಅಂದ್ರೆ ಆಧಾರ್, ವೋಟರ್ ಐಡಿ ಎಲ್ಲದರಲ್ಲಿಯೂ ಮುತ್ತು ಎಂದೇ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಮುತ್ತುವಾಗಿ ಸಾಕಷ್ಟು ಕಡೆಗಳಲ್ಲಿ ಕೆಲಸ ಮಾಡಿದ್ದಾರೆ. ಪೇಂಟರ್, ಟೀ ಮಾಸ್ಟರ್, ಪರೋಟಾ ಮಾಸ್ಟರ್ ಎಂದೆಲ್ಲಾ ಜನ ಮುತ್ತು ಅವರನ್ನು ಕರೆಯುತ್ತಿದ್ದರು. ತನ್ನ 26ನ್ನೇ ವಯಸ್ಸಿನಲ್ಲಿಯೇ ಇಂಥ ನಿರ್ಧಾರ ಮಾಡಿದ ಪೇಚಿಯಮ್ಮಾಳ್ ಗೆ ಮೊದಮೊದಲು ಬಹಳ ಕಷ್ಟವಾಗುತ್ತಿತ್ತಂತೆ. ತಾನೂ ಗಂಡಸೇ ಎಂದು ನಂಬಿಸಲು ಮಾಡಲು ಗಂಡಸರ ಶೌಚಾಲಯ ಬಳಸುತ್ತಿದ್ದರಂತೆ. ಗಂಡಸರ ಸೀಟ್ ನಲ್ಲಿಯೇ ಕುಳಿತು ಪ್ರಯಾಣಿಸುತ್ತಿದ್ದರಂತೆ.

ಪೇಚಿಯಮ್ಮಾಳ್ ಮುತ್ತುವಾಗಿ ಇಷ್ಟು ವರ್ಷ ಪಟ್ಟ ಶ್ರಮಕ್ಕೆ, ಕಷ್ಟಕ್ಕೆ ಫಲ ಸಿಕ್ಕಿದೆ. ಅವರ ಮಗಳ ಮದುವೆಯಾಗಿದೆ. ಸುಖವಾಗಿ ಸಂಸಾರ ನಡೆಸುತ್ತಿದ್ದಾಳೆ. ತನ್ನ ತಾಯಿಯ ಬಗ್ಗೆ ಮಾತನಾಡುವ ಷಣ್ಮುಗಸುಂದರಿ ತನ್ನ ತಾಯಿ ನನಗಾಗಿ ಅವಳ ಜೀವನವನ್ನೇ ಮುಡುಪಾಗಿಟ್ಟಿದ್ದಾಳೆ. ಅವಳ ತ್ಯಾಗಕ್ಕೆ ಬೆಲೆ ಕಟ್ಟಲಾಗದು ಎಂದು ಹೇಳುತ್ತಾರೆ. ಅದಕ್ಕೆ ಅಲ್ವೇ ಹೇಳುವುದು ’ತಾಯಿಯೇ ದೇವರು’.

Leave A Reply

Your email address will not be published.

error: Content is protected !!