ಖ್ಯಾತ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನ ಅಷ್ಟಕ್ಕೂ ಆಸ್ಪತ್ರೆಯಲ್ಲಿ ಆಗಿದ್ದೇನು ಗೊತ್ತಾ

ಖ್ಯಾತ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನ ಹೊಂದಿದ್ದಾರೆ. ಅನಾರೋಗ್ಯದ ಹಿನ್ನೆಲೆ ವಿದ್ಯಾಸಾಗರ್ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ನಟಿ ಮೀನಾ ಪತಿ ವಿದ್ಯಾಸಾಗರ್ ನಿನ್ನೆ ರಾತ್ರಿ ಜೂನ್ 28 ರಂದು ಚೆನ್ನೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದ್ದಾರೆ. ವಿದ್ಯಾಸಾಗರ್ ಅವರನ್ನು ಕಳೆದ ಎರಡು ದಿನಗಳ ಹಿಂದೆಯೇ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಕಳೆದ ಕೆಲವು ವರ್ಷಗಳಿಂದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದ ವಿದ್ಯಾಸಾಗರ್ ಅವರು ತಮ್ಮ 48 ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಮೀನಾ ಪತಿ ವಿದ್ಯಾಸಾಗರ್ ಅವರು ಈ ಮೊದಲು ಕೊರೊನಾ ಸೋಂಕಿಗೆ ಒಳಗಾಗಿದ್ದರು. ಬಳಿಕ ರೋಗದಿಂದ ಚೇತರಿಸಿಕೊಂಡಿದ್ದರು. ನಂತರ, ಮಾರ್ಚ್ 2022 ರ ಅಂತ್ಯದ ವೇಳೆಗೆ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ.
ಮೀನಾ 2009ರಲ್ಲಿ ಬೆಂಗಳೂರಿನ ಮೂಲದ ಉದ್ಯಮಿ ವಿದ್ಯಾಸಾಗರ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ 11 ವರ್ಷದ ನೈನಿಕಾ ಎಂಬ ಮಗಳಿದ್ದಾಳೆ.ವಿದ್ಯಾ ಸಾಗರ್ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದರು. ಮದುವೆಯ ನಂತರ ಈ ಜೋಡಿ ಚೆನ್ನೈನಲ್ಲಿ ನೆಲೆಸಿದ್ದರು.

ಮೀನಾ ಪತಿ ವಿದ್ಯಾಸಾಗರ್ ನಿಧನದ ಸುದ್ದಿ ಕೇಳಿ ಚಿತ್ರರಂಗದ ಸದಸ್ಯರು ಮತ್ತು ಲಕ್ಷಾಂತರ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಶರತ್ ಕುಮಾರ್, ಖುಷ್ಬೂ ಸುಂದರ್, ವೆಂಕಟೇಶ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ. ಶರತ್ ಕುಮಾರ್ ಟ್ವೀಟ್ ಮಾಡಿ ನಿಜಕ್ಕೂ ಆಘಾತಕಾರಿ ಸುದ್ದಿ ಎಂದು ಹೇಳಿದ್ದಾರೆ. ಶರತ್ ಕುಮಾರ್ ಮತ್ತು ಮೀನಾ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟ ವೆಂಕಟೇಶ್ ಟ್ವೀಟ್ ಮಾಡಿ, ‘ವಿದ್ಯಾಸಾಗರ್ ನಿಧನ ನಿಜಕ್ಕೂ ಆಘಾತಕಾರಿ. ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ದೇವರು ನೀಡಲಿ’ ಎಂದು ಟ್ವೀಟ್ ಮಾಡಿದ್ದಾರೆ.

ನಟಿ ಖುಷ್ಬೂ ಟ್ವೀಟ್ ಮಾಡಿ, ‘ಇಷ್ಟು ಭಯಾನಕ ಸುದ್ದಿಯೊಂದಿಗೆ ಬೆಳಗ್ಗೆ ಪ್ರಾರಂಭವಾಯಿತು. ಮೀನಾ ಪತಿ ವಿದ್ಯಾಸಾಗರ್ ಇನ್ನಿಲ್ಲ ಎನ್ನುವ ಸುದ್ದಿ ನಂಬಲು ಸಾದ್ಯವಾಗುತ್ತಿಲ್ಲ. ದೀರ್ಘ ಸಮಯದಿಂದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಹೇಳಿದರು. ವಿದ್ಯಾಸಾಗರ್ ಅವರ ಅಂತ್ಯಸಂಸ್ಕಾರ ಇಂದು ಮಧ್ಯಾಹ್ನ 2 ಗಂಟೆಗೆ ಚೆನ್ನೈನ ಬೆಸೆಂಟ್ ನಗರದ ಸ್ಮಶಾನದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ನಟಿ ಮೀನಾ ದಕ್ಷಿಣ ಭಾರತದ ಖ್ಯಾತ ನಟಿ. ತಮಿಳು, ತೆಲುಗು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ನಟಿಸಿರುವ ಮೀನಾ 90 ದಶಕದ ಬಹುಬೇಡಿಯ ನಟಿ. ಮೀನಾ ಬಾಲ ಕಲಾವಿದೆಯಾಗಿ ತಮ್ಮ ಸಿನಿ ವೃತ್ತಿಜೀವನವನ್ನು ಪ್ರಾರಂಭಿಸಿದರು. 90ರ ದಶಕ ಮತ್ತು 2000ರ ದಶಕದ ಉತ್ತರಾರ್ಧದಲ್ಲಿ ಪ್ರಮುಖ ಮಹಿಳಾ ಪಾತ್ರಗಳಲ್ಲಿ ನಟಿಸಿ, ಹೆಚ್ಚು ಬೇಡಿಕೆ ನಟಿಯರಲ್ಲಿ ಒಬ್ಬರಾಗಿದ್ದರು. ಕನ್ನಡದ ಪುಟ್ನಂಜ, ಸ್ವಾತಿಮುತ್ತು ಸೇರಿದಂತೆ ವಿವಿಧ ಭಾಷೆಗಳಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಮೀನಾ ಮಿಂಚಿದ್ದಾರೆ.

ಅವರು ದಕ್ಷಿಣ ಭಾರತದ ಎಲ್ಲಾ ಸೂಪರ್‌ಸ್ಟಾರ್‌ಗಳೊಂದಿಗೆ ನಟಿಸಿದ್ದಾರೆ. ಇನ್ನು ಮೀನಾ ಇತ್ತೀಚಿಗಷ್ಟೆ ರಿಲೀಸ್ ಆಗಿ ಸೂಪರ್ ಸಕ್ಸಸ್ ಆಗಿರುವ ದೃಶ್ಯಂ ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಇದಲ್ಲದೇ ಇನ್ನು ಅನೇಕ ಸಿನಿಮಾಗಳಲ್ಲಿ ಮೀನಾ ನಟಿಸಿದ್ದಾರೆ. ಮೀನಾ ಅವರ ಹಾದಿಯಲ್ಲೇ ಮಗಳು ನೈನಿಕಾ ಕೂಡ ಬಾಲ ಕಲಾವಿದೆಯಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದರು. ಬ್ಲಾಕ್‌ಬಸ್ಟರ್ ಚಿತ್ರ ತೇರಿ ಯಲ್ಲಿ ಅವರು ವಿಜಯ್ ಮಗಳ ಪಾತ್ರವನ್ನು ನಿರ್ವಹಿಸಿದ್ದಾರೆ.

Leave a Comment

error: Content is protected !!