ಹಂಪಿಯ ಬಡವಿಲಿಂಗದ ಬಗ್ಗೆ ನೀವು ತಿಳಿಯದ ಕುತೂಹಲಕಾರಿ ವಿಷಯ ಓದಿ.

ಹಂಪಿಯ ಬಡವಿಲಿಂಗ ದೇವಾಲಯದ ಹೆಸರು ಹೇಗೆ ಬಂತು, ಅದರ ವಿಶೇಷತೆಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ವಿಶ್ವವಿಖ್ಯಾತ ಹಂಪಿಯು ದಕ್ಷಿಣ ಭಾರತದ ದೊರೆಗಳಾದ ವಿಜಯ ನಗರ ಸಾಮ್ರಾಜ್ಯದ ಕಾಲದಲ್ಲಿ ವೈಭವದಿಂದ ಮೆರೆದ ನಗರಿ. ತ್ರೇತಾಯುಗದ ರಾಮನ ಕಾಲದಿಂದಲೂ ಪ್ರಖ್ಯಾತಿ ಪಡೆದ ಹಂಪಿಯಲ್ಲಿ ವಿಜಯ ನಗರದ ಶಿಲ್ಪಾಕಲಾ ಸಂಪತ್ತಿಗೆ ಕುರುಹಾಗಿ ಅನೇಕ ಸ್ಮಾರಕಗಳಿವೆ. ಹಂಪಿಯಲ್ಲಿರುವ ದೇವಾಲಯಗಳಲ್ಲಿ ಬಡವಿಲಿಂಗ ದೇವಸ್ಥಾನ ಹಲವು ವಿಧದಲ್ಲಿ ವಿಶಿಷ್ಟವಾಗಿದೆ. ಹಂಪಿಯಲ್ಲಿ ಪ್ರಸಿದ್ಧವಾಗಿರುವ ಉಗ್ರ ನರಸಿಂಹ ದೇವಸ್ಥಾನದ ಸಮೀಪದಲ್ಲಿ 9 ಅಡಿ ಎತ್ತರವಿರುವ ಬ್ರಹತ್ ಶಿವಲಿಂಗದ ಪುಟ್ಟ ಕಲ್ಲಿನ ದೇವಸ್ಥಾನವನ್ನು ಕಾಣಬಹುದು. ಈ ಲಿಂಗವು ಏಕಶಿಲೆಯ ಕರಿಕಲ್ಲಿನಿಂದ ಮಾಡಲಾಗಿದ್ದು ಮೂರು ಕಣ್ಣಿನ ಗುರುತುಗಳನ್ನು ಹೊಂದಿದೆ ಇದು ಶಿವನ ಮೂರು ಕಣ್ಣುಗಳನ್ನು ಪ್ರತಿನಿಧಿಸುತ್ತದೆ. ಈ ದೇವಾಲಯದ ಒಳಾಂಗಣ ಯಾವಾಗಲೂ ನೀರಿನಿಂದ ತುಂಬಿರುತ್ತದೆ ತುಂಗಭದ್ರಾ ನದಿಯಿಂದ ಒಂದು ಕಾಲುವೆಯ ಮೂಲಕ ದೇವಸ್ಥಾನದ ಒಳಗೆ ಹರಿದು ನಂತರ ಹತ್ತಿರದ ಹೊಲಗಳಿಗೆ ಹೋಗುತ್ತದೆ. ಹಿಂದೆ ಒಬ್ಬ ಬಡ ಮುದುಕಿಯು ಶಿವನಲ್ಲಿ ತನ್ನ ಆಸೆಗಳನ್ನು ಈಡೇರಿಸಿದರೆ ಒಂದು ಶಿವಲಿಂಗವನ್ನು ಪ್ರತಿಷ್ಠಾಪಿಸುವುದಾಗಿ ಹೇಳಿಕೊಂಡಿದ್ದರಂತೆ ಪರಶಿವನು ಮುದುಕಿಯ ಆಸೆಯನ್ನು ಈಡೇರಿಸಿದರಿಂದ ಈ ಶಿವಲಿಂಗವನ್ನು ಮುದುಕಿಯು ಪ್ರತಿಷ್ಠಾಪಿಸಿದರಂತೆ ಆದ್ದರಿಂದ ಆಕೆಯ ನೆನಪಿಗಾಗಿ ಈ ಲಿಂಗಕ್ಕೆ ಬಡವಿಲಿಂಗ ಎಂಬ ಹೆಸರು ಬಂದಿದೆ. ವಿಜಯನಗರ ಅರಸರ ಕಾಲದಲ್ಲಿ ಈ ಲಿಂಗಕ್ಕೆ ವಿಶೇಷ ಪೂಜೆಗಳು ನಡೆಯುತ್ತಿದ್ದವು. ನಂತರ ಬಹುಮನಿ ಸುಲ್ತಾನರ ದಾಳಿಗೆ ಒಳಗಾದ ಮೇಲೆ ಈ ದೇವಾಲಯದ ಮೇಲ್ಛಾವಣಿಯು ಹಾನಿಗೊಳಗಾಯಿತು ಇದರಿಂದ ಹಾನಿಗೊಳಗಾದ ದೇವಾಲಯಕ್ಕೆ ಪೂಜೆ ಮಾಡಬಾರದೆಂಬ ಭಾವನೆ ಜನರಿಗಿರುವ ಕಾರಣ ಸುಮಾರು 500 ವರ್ಷಗಳವರೆಗೆ ಯಾವುದೇ ಪೂಜೆಗಳು ನಡೆಯಲಿಲ್ಲ.

1986 ರ ಸಮಯದಲ್ಲಿ ಕಂಚಿನ ಮಠದ ಶ್ರೀಗಳು ಆಗಮಿಸಿದಾಗ ಬಡವಿಲಿಂಗದ ದರ್ಶನ ಪಡೆದು ಲಿಂಗಕ್ಕೆ ಯಾವುದೇ ಹಾನಿಯಾಗದ ಕಾರಣ ಪೂಜೆಗೆ ಯೋಗ್ಯವಾಗಿದೆ ಎಂದು ತಿಳಿಸಿಕೊಡುತ್ತಾರೆ. ಆಗ ಆನೆಗುಂದಿಯ ವಿಜಯನಗರ ರಾಜಮನೆತನದವರು ತಾವೇ ಖುದ್ದಾಗಿ ಒಬ್ಬ ಪುರೋಹಿತರನ್ನು ನೇಮಿಸಿ ಲಿಂಗಕ್ಕೆ ಪೂಜೆ ಪುನಸ್ಕಾರಗಳು ನಡೆಯುವಂತೆ ನೋಡಿಕೊಳ್ಳುತ್ತಾರೆ. ಬಹುಮನಿ ಸುಲ್ತಾನರ ದಾಳಿಗೆ ಒಳಗಾಗಿ ಛಾವಣಿಯಲ್ಲಿ ದೊಡ್ಡ ರಂಧ್ರವಾಗಿತ್ತು ಈ ರಂಧ್ರದ ಮೂಲಕ ಸೂರ್ಯ ರಶ್ಮಿ ನೇರವಾಗಿ ಲಿಂಗದ ಮೇಲೆ ಬೀಳುತ್ತದೆ ಲಿಂಗದ ಕೆಳಗೆ ನೀರಿರುವುದರಿಂದ ಸೂರ್ಯನ ಕಿರಣಗಳು ಪ್ರತಿಫಲಿಸಿ ಒಳ್ಳೆಯ ದೃಶ್ಯ ಸಂಯೋಜನೆಯನ್ನು ಮೂಡಿಸುತ್ತದೆ. ಬಡವಿಲಿಂಗ ದೇವಸ್ಥಾನಕ್ಕೆ ಒಳಪ್ರವೇಶಿಸಲು ಒಂದು ದ್ವಾರವಿದೆ ಆದರೆ ಶಿವಲಿಂಗ ಯಾವಾಗಲೂ ನೀರಿನಿಂದ ತುಂಬಿರುವುದರಿಂದ ಭಕ್ತಾದಿಗಳಿಗೆ ಶಿವಲಿಂಗದ ಹತ್ತಿರ ಹೋಗಲು ಆಗುವುದಿಲ್ಲ. ಬಾಗಿಲ ಬಳಿ ನಿಂತು ಶಿವಲಿಂಗಕ್ಕೆ ನಾಣ್ಯವನ್ನು ಎಸಗಿದರೆ ಅದು ನೀರಿನಲ್ಲಿ ಬೀಳದೆ ಶಿವಲಿಂಗದ ಮೇಲೆ ಇದ್ದರೆ ಅವರ ಆಕಾಂಕ್ಷೆಗಳು ಈಡೇರುತ್ತವೆ ಎಂಬ ನಂಬಿಕೆಯಿದೆ. ಕಳೆದ 34 ವರ್ಷಗಳಿಂದ ಬಡವಿಲಿಂಗಕ್ಕೆ ಪೂಜೆ ಸಲ್ಲಿಸುತ್ತಿರುವ ಇಲ್ಲಿಯ ಅರ್ಚಕರ ಹೆಸರು ಕೃಷ್ಣ ಭಟ್. ಇವರ ವಯಸ್ಸು 86 ವರ್ಷ. ದೇಹ ಬಾಗಿದ್ದರೂ ಮೊದಲಿನಷ್ಟು ಶಕ್ತಿ ಇಲ್ಲದಿದ್ದರೂ ಪ್ರತಿದಿನ ಮಧ್ಯಾಹ್ನಕ್ಕೆ ಬಂದು ಲಿಂಗದ ಕೆಳಗೆ ಹರಿಯುತ್ತಿದ್ದ ನೀರಿನಲ್ಲಿ ಲಿಂಗವನ್ನು ಶುಚಿಗೊಳಿಸಿ ಲಿಂಗಕ್ಕೆ ವಿಭೂತಿಯನ್ನು ಹಚ್ಚಿ ಹೂಗಳಿಂದ ಅಲಂಕರಿಸಿ ಶಾಸ್ತ್ರೋಕ್ತವಾಗಿ ಪೂಜೆ ಮಾಡುತ್ತಾರೆ. ಶಿವಲಿಂಗದ ಮಂಟಪಗಳನ್ನು ಬಳಸಿ ನಿಧಾನವಾಗಿ ಲಿಂಗದ ಮೇಲೇರಿ ಮೇಲ್ಭಾಗವನ್ನು ಸ್ವಚ್ಛಗೊಳಿಸುವ ಸಾಹಸವನ್ನು ನೋಡಿ ಎಲ್ಲರ ಮೈ ರೋಮಾಂಚನವಾಗುತ್ತದೆ. ಬಡವಿಲಿಂಗ ದೇವಸ್ಥಾನ ನೋಡಲು ಬರುವ ವಿದೇಶಿಗರ ಬಾಯಲ್ಲಿ ಸಹ ಅರ್ಚಕರು ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಜಪವನ್ನು ಹೇಳಿಸುತ್ತಾರೆ. ಇವರಿಗೆ ಮುಪ್ಪಾದರು ಇವರ ಭಕ್ತಿ ಹಾಗೂ ಸಂಕಲ್ಪಗಳಿಗೆ ಮುಪ್ಪಾಗಿಲ್ಲ. ಹಂಪಿಯಲ್ಲೆ ಬಡವಿಲಿಂಗ ದೊಡ್ಡ ಲಿಂಗವಾಗಿದೆ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.

Leave a Comment

error: Content is protected !!