ರೈಸ್ ಮಿಲ್​ನಲ್ಲಿ ಗುಮಾಸ್ತನಾಗಿ ಕೆಲಸ ಮಾಡ್ತಿದ್ದ BS.ಯಡಿಯೂರಪ್ಪ ರಾಜಕೀಯದಲ್ಲಿ ಬೆಳೆದಿದ್ದು ಹೇಗೆ ಗೊತ್ತಾ? ನೀವು ತಿಳಿಯದ ರೋಚಕ ಕತೆ ಇಲ್ಲಿದೆ

ಶಿಕಾರಿಪುರದ ರೈಸ್​ ಮಿಲ್​ನ ಗುಮಾಸ್ತರಾಗಿದ್ದ ಬಿ.ಎಸ್. ಯಡಿಯೂರಪ್ಪ ಬಳಿಕ ಆರ್​ಎಸ್​ಎಸ್​ ಸಂಘಟನೆಯಲ್ಲಿ ತೊಡಗಿಸಿಕೊಂಡು ಮುಖ್ಯಮಂತ್ರಿ ಹುದ್ದೆಯನ್ನೂ ಅಲಂಕರಿಸಿದರು. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಯಡಿಯೂರಪ್ಪನವರ 3 ದಶಕಗಳ ರಾಜಕೀಯ ಜೀವನದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಬಿ.ಎಸ್. ಯಡಿಯೂರಪ್ಪ ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ಇದು ಕರ್ನಾಟಕದ ರಾಜಕಾರಣದಲ್ಲಿ ಮರೆಯಲಾಗದ ಹೆಸರು. ಕರ್ನಾಟಕದಲ್ಲಿ ಹೇಳ ಹೆಸರಿಲ್ಲದಂತಿದ್ದ ಬಿಜೆಪಿ ಪಕ್ಷಕ್ಕೆ ಅಡಿಪಾಯ ಹಾಕಿ, ಇಡೀ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣಕರ್ತರಾದವರು ಯಡಿಯೂರಪ್ಪ ಎಂಬುದು ಗೊತ್ತಿಲ್ಲದ ವಿಚಾರವೇನಲ್ಲ. ಬರೋಬ್ಬರಿ 4 ಬಾರಿ ಕರ್ನಾಟಕದ ಮುಖ್ಯಮಂತ್ರಿ ಸ್ಥಾನವನ್ನು ಏರಿರುವ ವ್ಯಕ್ತಿ ಎಂಬ ಹೆಗ್ಗಳಿಕೆಯೂ ಯಡಿಯೂರಪ್ಪನವರದು.

ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದೆ, ಆರ್​ಎಸ್​ಎಸ್​ ಕಾರ್ಯಕರ್ತನಾಗಿ ಗುರುತಿಸಿಕೊಂಡು ಬಳಿಕ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ ಯಡಿಯೂರಪ್ಪ 3 ದಶಕಗಳಿಗೂ ಹೆಚ್ಚು ಕಾಲ ರಾಜಕೀಯದಲ್ಲಿ ಸವೆಸಿದ ಹಾದಿ ಸುಲಭದ್ದೇನಾಗಿರಲಿಲ್ಲ. ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಬಡ ಕುಟುಂಬವೊಂದರಲ್ಲಿ ಸಿದ್ಧಲಿಂಗಪ್ಪ ಮತ್ತು ಪುಟ್ಟತಾಯಮ್ಮ ಅವರ ಮಗನಾಗಿ ಹುಟ್ಟಿದ ಬಿ.ಎಸ್. ಯಡಿಯೂರಪ್ಪ ತಮ್ಮ ಕಾಲೇಜು ದಿನಗಳಲ್ಲಿಯೇ ಆರ್​ಎಸ್​ಎಸ್​ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದರು. ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ಯಡಿಯೂರಪ್ಪ ಕಾಲೇಜು ಶಿಕ್ಷಣವನ್ನು ಮುಗಿಸಿದ ನಂತರ ಕೆಲಸಕ್ಕಾಗಿ ಹುಡುಕುತ್ತಿದ್ದರು. ಮಂಡ್ಯದಿಂದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರಕ್ಕೆ ವಲಸೆ ಹೋಗಿ, 1965ರಲ್ಲಿ ಅಲ್ಲಿನ ರೈಸ್ ಮಿಲ್​ನಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿಂದ ಯಡಿಯೂರಪ್ಪನವರ ಅದೃಷ್ಟವೇ ಬದಲಾಯಿತು.

ತಾವು ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದ ಶಿಕಾರಿಪುರದ ವೀರಭದ್ರಶಾಸ್ತ್ರಿ ಶಂಕರ್ ರೈಸ್ ಮಿಲ್​ನ ಮಾಲೀಕರ ಮಗಳು ಮೈತ್ರಾದೇವಿಯನ್ನು ಪ್ರೀತಿಸಿದ ಯಡಿಯೂರಪ್ಪ 1967ರಲ್ಲಿ ಅವರನ್ನು ಮದುವೆಯಾದರು. ಸಾಕಷ್ಟು ಶ್ರೀಮಂತರಾಗಿದ್ದ ಮಾವನ ಮಿಲ್ ಮತ್ತಿತರ ವ್ಯವಹಾರಗಳನ್ನು ನೋಡಿಕೊಳ್ಳುತ್ತಾ ಯಡಿಯೂರಪ್ಪ ಶಿಕಾರಿಪುರದಲ್ಲಿಯೇ ಹೊಸ ಜೀವನವನ್ನು ಆರಂಭಿಸಿದರು. 2004ರಲ್ಲಿ ಯಡಿಯೂರಪ್ಪನವರ ಪತ್ನಿ ಮೈತ್ರಾದೇವಿ ಅವರ ಮನೆಯ ಸಂಪ್​ನಲ್ಲಿ ಬಿದ್ದು ಸಾವನ್ನಪ್ಪಿದರು.

ಆ ಪ್ರಕರಣದಲ್ಲಿ ಯಡಿಯೂರಪ್ಪ ಕೊಲೆ ಆರೋಪವನ್ನೂ ಎದುರಿಸಬೇಕಾಯಿತು. ಬಳಿಕ, ಆ ಕೇಸ್ ಖುಲಾಸೆಯಾಯಿತು. 79 ವರ್ಷದ ಯಡಿಯೂರಪ್ಪನವರಿಗೆ ಬಿ.ವೈ. ವಿಜಯೇಂದ್ರ, ಬಿ.ವೈ. ರಾಘವೇಂದ್ರ, ಅರುಣಾದೇವಿ, ಪದ್ಮಾವತಿ, ಉಮಾದೇವಿ ಎಂಬ ಮಕ್ಕಳಿದ್ದಾರೆ. ಮೈತ್ರಾದೇವಿಯವರನ್ನು ಮದುವೆಯಾದ ನಂತರ ಶಿವಮೊಗ್ಗದಲ್ಲಿ ಹಾರ್ಡ್​ವೇರ್ ಅಂಗಡಿಯನ್ನು ತೆರೆದ ಯಡಿಯೂರಪ್ಪ ಅದರ ಜೊತೆಜೊತೆಗೆ ರಾಜಕೀಯದಲ್ಲೂ ತೊಡಗಿಸಿಕೊಂಡರು. 1972ರಲ್ಲಿ ಶಿಕಾರಿಪುರದ ಜನಸಂಘದ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಮೊದಲ ಬಾರಿಗೆ ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡರು. ನಂತರ 1975ರಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ 45 ದಿನಗಳ ಕಾಲ ಜೈಲುವಾಸವನ್ನೂ ಅನುಭವಿಸಿದರು. 1977ರಲ್ಲಿ ಶಿಕಾರಿಪುರದ ಪುರಸಭಾ ಅಧ್ಯಕ್ಷರಾಗಿ ಆಯ್ಕೆಯಾದರು. 1980ರಲ್ಲಿ ಶಿಕಾರಿಪುರ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷರಾದರು. 1983ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 1988ರಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. 1992ರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾದರು.

1994ರಲ್ಲಿ ವಿಧಾನಸಭಾ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರು. 2004ರಲ್ಲಿ 5ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 2006ರಲ್ಲಿ ಬಿಜೆಪಿ- ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅಧಿಕಾರ ವಹಿಸಿಕೊಂಡರು. ಆಗ ಹೆಚ್​.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. 20 ತಿಂಗಳು ಕುಮಾರಸ್ವಾಮಿ ಮತ್ತು ಉಳಿದ 20 ತಿಂಗಳು ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುತ್ತಾರೆ ಎಂಬುದು ಮೊದಲೇ ಮಾಡಿಕೊಂಡ ಒಪ್ಪಂದವಾಗಿತ್ತು. ಆದರೆ, ಯಡಿಯೂರಪ್ಪನಿಗೆ ಅಧಿಕಾರ ಬಿಟ್ಟುಕೊಡಲು ಕುಮಾರಸ್ವಾಮಿ ಒಪ್ಪದ ಕಾರಣ ಜೆಡಿಎಸ್​ಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ವಾಪಾಸ್ ಪಡೆಯಿತು.

ಇದರಿಂದ ಸರ್ಕಾರ ಪತನಗೊಂಡು, ರಾಷ್ಟ್ರಪತಿ ಆಡಳಿತ ಶುರುವಾಯಿತು. ನಂತರ ಜೆಡಿಎಸ್ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯ ಶಮನಗೊಂಡ ಪರಿಣಾಮ 2007ರ ನವೆಂಬರ್ 12ರಂದು ಬಿ.ಎಸ್. ಯಡಿಯೂರಪ್ಪ ಮೊದಲ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ಇಡೀ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತಂದರು. ಆದರೆ, ಸರ್ಕಾರದೊಳಗಿನ ಅಸಮಾಧಾನದಿಂದ ಒಂದೇ ವಾರಕ್ಕೆ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯಬೇಕಾಯಿತು.

2008ರ ಮೇ 30ರಂದು ಮತ್ತೆ 2ನೇ ಬಾರಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ನೀಡಿದ ತನಿಖಾ ವರದಿಯಲ್ಲಿ ಯಡಿಯೂರಪ್ಪನವರ ಹೆಸರು ಇದ್ದುದರಿಂದ ಹೈಕಮಾಂಡ್ ಸೂಚನೆ ಮೇರೆಗೆ ಅಧಿಕಾರ ಸ್ವೀಕರಿಸಿ 3 ವರ್ಷಕ್ಕೆ ಅಂದರೆ 2011ರ ಜುಲೈ 31ರಂದು ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ, ಬಿಜೆಪಿ ನಾಯಕರ ವಿರುದ್ಧ ಅಸಮಾಧಾನಗೊಂಡು, ಕೆಜಿಪಿ ಪಕ್ಷವನ್ನು ಕಟ್ಟಿ, 2013ರಲ್ಲಿ ಅದೇ ಪಕ್ಷದಿಂದ ಸ್ಪರ್ಧಿಸಿ ಶಾಸಕರಾದರು. ನಂತರ ಮತ್ತೆ ಬಿಜೆಪಿಗೆ ಸೇರ್ಪಡೆಯಾದರು.

2018ರ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದ ಕಾರಣದಿಂದ 104 ಮತಗಳನ್ನು ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಪಕ್ಷಕ್ಕೆ ಸರ್ಕಾರ ರಚಿಸಲು ರಾಜ್ಯಪಾಲ ವಜುಭಾಯಿ ವಾಲಾ ಆಹ್ವಾನ ನೀಡಿದ್ದರು. ಅದರಂತೆ 2018ರ ಮೇ 17ರಂದು ಬಿ.ಎಸ್. ಯಡಿಯೂರಪ್ಪ 3ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ, ಕಾಂಗ್ರೆಸ್- ಜೆಡಿಎಸ್ ಮೈತ್ರಿಯಾಗಿದ್ದರಿಂದ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲಾರದೆ ಮೇ 23ರಂದು ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಬಳಿಕ, 2019ರಲ್ಲಿ ಆಪರೇಷನ್ ಕಮಲ ನಡೆಸಿ, ಮೈತ್ರಿ ಸರ್ಕಾರವನ್ನು ಪತನಗೊಳಿಸಿದರು. 2019ರ ಜುಲೈ 26ರಂದು 4ನೇ ಬಾರಿಗೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ತೆಕ್ಕೆಗೆ ಹಾಕಿಕೊಂಡು ಬಹುಮತ ಸಾಬೀತುಪಡಿಸಿದರು. ಆದರೆ, ಪಕ್ಷದೊಳಗೆ ಎದ್ದ ಭಿನ್ನಾಭಿಪ್ರಾಯಗಳು, ಕುಟುಂಬ ರಾಜಕಾರಣದ ಆರೋಪ ಮುಂತಾದವುಗಳನ್ನು ಬಗೆಹರಿಸಲು ಸಾಧ್ಯವಾಗದ ಕಾರಣ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ವದಂತಿಗಳು ಹರಡುತ್ತಿದ್ದವು. ಆದರೆ, ಯಡಿಯೂರಪ್ಪ ಮಾತ್ರ ತಾವು ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಮುಗಿಸುವುದಾಗಿ ಘೋಷಿಸುತ್ತಲೇ ಇದ್ದರು. ಆದರೆ, ಇಂದು ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.

ಹೀಗಾಗಿ, ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪನವರ ಉತ್ತರಾಧಿಕಾರಿ ಯಾರೆಂಬ ಪ್ರಶ್ನೆ ಎದ್ದಿದೆ. 4 ಬಾರಿ ಕರ್ನಾಟಕದ ಮುಖ್ಯಮಂತ್ರಿಯಾದರೂ ಯಡಿಯೂರಪ್ಪ ಎಷ್ಟು ಅದೃಷ್ಟವಂತ ರಾಜಕಾರಣಿಯೇ ಅಷ್ಟೇ ದುರಾದೃಷ್ಟವಂತರೂ ಹೌದು. 4 ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಿ.ಎಸ್. ಯಡಿಯೂರಪ್ಪ ಒಂದು ಬಾರಿಯೂ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಕರ್ನಾಟಕ ಮಾತ್ರವಲ್ಲದೆ ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪ ಕ್ರಮೇಣ ತಮ್ಮದೇ ಪಕ್ಷದಲ್ಲಿ ಮೂಲೆಗುಂಪಾಗತೊಡಗಿದರು. ವಿರೋಧ ಪಕ್ಷದವರ ಆರೋಪಗಳ ಜೊತೆಗೆ ಸ್ವಪಕ್ಷೀಯರ ಅಸಮಾಧಾನ, ಆರೋಪ, ಆಕ್ರೋಶವನ್ನು ಶಮನ ಮಾಡುವುದು ಯಡಿಯೂರಪ್ಪನವರಿಗೆ ಸವಾಲಿನ ಕೆಲಸವಾಗಿತ್ತು.

ಜೆಡಿಎಸ್ ಪಕ್ಷದಲ್ಲಿ ಕುಟುಂಬ ರಾಜಕಾರಣ ಎಂದು ಜರಿಯುತ್ತಾ ಅಧಿಕಾರಕ್ಕೆ ಬಂದ ಬಿ.ಎಸ್. ಯಡಿಯೂರಪ್ಪ ಕೊನೆಗೆ ತಮ್ಮದೇ ಪಕ್ಷದವರಿಂದ ತಾವೂ ಆ ಆರೋಪವನ್ನು ಎದುರಿಸಬೇಕಾಯಿತು. ಯಡಿಯೂರಪ್ಪನವರ ಮಕ್ಕಳಾದ ಬಿ.ವೈ. ವಿಜಯೇಂದ್ರ, ರಾಘವೇಂದ್ರ, ಹಾಗೂ ಅಳಿಯ ಮುಖ್ಯಮಂತ್ರಿಗಳ ಅಧಿಕಾರದಲ್ಲಿ ಮೂಗು ತೂರಿಸುತ್ತಿದ್ದಾರೆಂಬ ಆರೋಪವನ್ನು ಅವರು ಎದುರಿಸಬೇಕಾಯಿತು. ತಮ್ಮದೇ ಪಕ್ಷದವರ ಒಳರಾಜಕೀಯದಿಂದ ಯಡಿಯೂರಪ್ಪ 4ನೇ ಬಾರಿಯೂ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಕಾಂಗ್ರೆಸ್‍ನ ಭದ್ರಕೋಟೆಯನ್ನು ಭೇದಿಸಿ ಪ್ರಪ್ರಥಮ ಬಾರಿಗೆ ದಕ್ಷಿಣ ಭಾರತದಲ್ಲಿ ಬಿಜೆಪಿಯ ಅಧಿಪತ್ಯವನ್ನು ಸ್ಥಾಪಿಸಲು ಬಿ.ಎಸ್. ಯಡಿಯೂರಪ್ಪ ಯಶಸ್ವಿಯಾಗಿದ್ದು ಸಣ್ಣ ಮಾತೇನಲ್ಲ.

ಇದೇ ಕಾರಣಕ್ಕೆ ಬಿಜೆಪಿ ಹೈಕಮಾಂಡ್ ವಲಯದಲ್ಲೂ ಯಡಿಯೂರಪ್ಪ ತಮ್ಮದೇ ಆದ ವರ್ಚಸ್ಸನ್ನು ಉಳಿಸಿಕೊಂಡಿದ್ದಾರೆ. ಕರ್ನಾಟಕದ ಮೊದಲ ಬಿಜೆಪಿ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಮಾತ್ರವಲ್ಲದೆ ಕರ್ನಾಟಕದಲ್ಲಿ ಪ್ರಬಲವಾಗಿರುವ ಲಿಂಗಾಯತ ಸಮುದಾಯದ ಮೊದಲ ಮುಖ್ಯಮಂತ್ರಿಯೆಂಬ ಹೆಗ್ಗಳಿಕೆಯೂ ಯಡಿಯೂರಪ್ಪನವರದ್ದು. ಅದೇ ಕಾರಣಕ್ಕೆ ಲಿಂಗಾಯತ ಸಮಾಜದ ಎಲ್ಲ ಮಠಾಧೀಶರೂ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸದಂತೆ ಬಿಜೆಪಿ ಹೈಕಮಾಂಡ್ ಮೇಲೆ ಭಾರೀ ಒತ್ತಡ ಹೇರುತ್ತಲೇ ಬಂದಿದ್ದಾರೆ. ಈಗಾಗಲೇ 80 ವರ್ಷವಾಗಿರುವ ಯಡಿಯೂರಪ್ಪನವರಿಗೆ ಇನ್ನೊಮ್ಮೆ ಮುಖ್ಯಮಂತ್ರಿಯಾಗುವ ಅವಕಾಶ ಇಲ್ಲದ ಕಾರಣ ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪನವರ ಯುಗ ಮುಗಿದಂತಾಗಿದೆ.

Leave A Reply

Your email address will not be published.

error: Content is protected !!