ವಿದೇಶದಲ್ಲಿನ ಕೈ ತುಂಬಾ ಸಂಬಳ ಬಿಟ್ಟು ತಂದೆ ಆಸೆಯಂತೆ ಹಳ್ಳಿ ಜನರ ಅಭಿವೃದಿಗಾಗಿ ಗ್ರಾ.ಪ ಅಧ್ಯಕ್ಷೆಯಾದ ದಾವಣಗೆರೆ ಮಹಿಳೆ

ಇಂಜಿನಿಯರಿಂಗ್ ಮುಗಿಸಿ ಲಕ್ಷ ಲಕ್ಷ ಸಂಬಳ ಪಡೆಯುತ್ತಿದ್ದ ಟೆಕ್ಕಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆಯಾಗಿ ಆಯ್ಕೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಮೆರಿಕಾದಲ್ಲಿ ಐದು ವರ್ಷ ಸೇವೆ ಸಲ್ಲಿಸಿದ ಸಾಫ್ಟವೇರ್‌ ಎಂಜಿನಿಯರ್‌ ಮಹಿಳೆಯೊಬ್ಬರು ಗ್ರಾಮಾಭಿವೃದ್ಧಿಯ ಕನಸು ಹೊತ್ತು ಅಲ್ಲಿನ ಟೆಕ್‌ ಹುದ್ದೆಗೆ ರಾಜೀನಾಮೆ ನೀಡಿ, ಜಿಲ್ಲೆಯ ಜಗಳೂರು ತಾಲೂಕಿನ ಸೊಕ್ಕೆ ಗ್ರಾಮ ಪಂಚಾಯಿತಿ ಚುಕ್ಕಾಣಿ ಹಿಡಿದಿದ್ದಾರೆ. ತಂದೆಯ ಆಸೆಯಂತೆ ಗ್ರಾಮಾಭಿವೃದ್ಧಿಗೆ ಮರಳಿದ್ದು, ಹಳ್ಳಿಯನ್ನು ದಿಲ್ಲಿ ಮಾಡುವ ಕನಸು ಹೊಂದಿದ್ದಾರೆ. ಮೂವತ್ತೆರಡು ವರ್ಷದ ಆ ಸಾಫ್ಟ್‌ವೇರ್‌ ಎಂಜಿನಿಯರ್‌ ಸ್ವಾತಿ ತಿಪ್ಪೇಸ್ವಾಮಿ. ತಂದೆಯ ಇಷ್ಟದಂತೆ ಹಳ್ಳಿಗೆ ಆಗಮಿಸಿ, ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾಗಿದ್ದಾರೆ. ತದ ನಂತರ ಕಳೆದ ಫೆ.8ರಂದು ನಡೆದ ಚುನಾವಣೆಯಲ್ಲಿ ಗ್ರಾಪಂಗೆ ಎರಡುವರೆ ವರ್ಷ ಅವಧಿಗೆ ಅಧ್ಯಕ್ಷರಾಗಿಯೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಾಹಿತಿ ತಂತ್ರಜ್ಞಾನದಲ್ಲಿ ಬಿಇ ಪದವೀಧರೆ ಆಗಿರುವ ಸ್ವಾತಿ ಬೆಂಗಳೂರು ನಗರದಲ್ಲಿ ವಾಸವಾಗಿದ್ದರು. ಅಲ್ಲದೆ ಅಮೆರಿಕದಲ್ಲಿ ಐದು ವರ್ಷ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಸಮಾಜ ಸೇವೆ ಮಾಡುವ ತುಡಿತದೊಂದಿಗೆ ತಂದೆಯ ಒತ್ತಾಸೆಯ ಗ್ರಾಮಾಭಿವೃದ್ಧಿಯ ಕನಸು ಸಾಕಾರಕ್ಕಾಗಿ ಅವರು ತವರೂರಿಗೆ ಆಗಮಿಸಿದ್ದಾರೆ. ವಿದೇಶದಲ್ಲಿನ ಲಕ್ಷ ಲಕ್ಷ ಸಂಬಳ ಬರುವ ಹುದ್ದೆ ತೊರೆದು ತಮ್ಮ ಸ್ವಗ್ರಾಮ ಸೊಕ್ಕೆಗೆ ಹಿಂದಿರುಗಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಸ್ವಂತ ಗ್ರಾಮ ಸೊಕ್ಕೆಯಲ್ಲಿ ಗ್ರಾಮ ಪಂಚಾಯತ ಆಡಳಿತ ನಿರ್ವಹಣೆಗಾಗಿ ಅವರದೇ ಮನೆಯಲ್ಲಿ ಒಂದು ಕಚೇರಿ, ಸಭಾಂಗಣ ಮಾಡಿಕೊಂಡು ಈಗಾಗಲೇ ಗ್ರಾಮದ ಅಭಿವೃದ್ಧಿ ಕುರಿತಂತೆ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ್ದಾರೆ. ಜತೆಗೆ ಮಾದರಿ ಗ್ರಾಮ ಪಂಚಾಯಿತಿ ಮಾಡುವ ಉದ್ದೇಶವನ್ನು ಸಹ ಹೊಂದಿದ್ದಾರೆ.

ಕನಿಷ್ಟ ಮಳೆಯ ಭೂಭಾಗ ಹಾಗೂ ಹಿಂದುಳಿದ ಜನರೇ ಹೆಚ್ಚಾಗಿರುವ ಜಗಳೂರು ತಾಲೂಕು ಮೂರು ವರ್ಷದ ತೀವ್ರ ಬರಗಾಲದಿಂದ ಈ ವರ್ಷ ಅಷ್ಟೇ ಚೇತರಿಸಿಕೊಳ್ಳುತ್ತಿದೆ. ಸೊಕ್ಕೆ ಗ್ರಾಪಂ ವ್ಯಾಪ್ತಿಗೆ ಮೂರು ಹಳ್ಳಿಗಳು ಇದ್ದು ಅಲ್ಲಿನ ಒಟ್ಟು ಸದಸ್ಯರ ಬಲ 18. ಸಾಮಾನ್ಯ ಮಹಿಳೆ ಮೀಸಲಾತಿಯಡಿ ಸ್ವಾತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸ್ವಾತಿಯವರು ಅಮೆರಿಕದಲ್ಲಿ ಸಾಫ್ಟ್‍ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಿದ್ದರು. ತಂದೆಯನ್ನು ಹಾಗೂ ಗ್ರಾಮವನ್ನು ನೋಡಲು ಪ್ರತಿ ವರ್ಷ ರಜೆ ಹಾಕಿ ಗ್ರಾಮಕ್ಕೆ ಬರುತ್ತಿದ್ದರು. ಅದರಲ್ಲೂ ಜಗಳೂರು ತಾಲೂಕು ಎಂದರೆ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಒಂದು. ಸರಿಯಾಗಿ ಮಳೆ ಬೆಳೆ ಇಲ್ಲದೆ ಇಲ್ಲಿನ ಬಡ ಜನರಿಗೆ ಸರಿಯಾಗಿ ಉದ್ಯೋಗ ಸಿಗದೆ ಕಷ್ಟದ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಹಳ್ಳಿಗಾಡಿನಲ್ಲಿ ಮೂಲ ಸೌಲಭ್ಯಗಳ ಕೊರತೆಯನ್ನು ಕಣ್ಣಾರೆ ಕಂಡಿದ್ದರು. ಹೀಗಾಗಿ ಹಳ್ಳಿಗಳಲ್ಲೂ ಕನಿಷ್ಠ ಪ್ರಾಥಮಿಕ ಸೌಕರ್ಯಗಳನ್ನು ಕಲ್ಪಿಸುವ, ಹಳ್ಳಿಗಾಡಿನ ಜನರ ಜೀವನಮಟ್ಟವನ್ನು ಸುಧಾರಿಸುವ ಕನಸನ್ನು ಸ್ವಾತಿ ತಿಪ್ಪೇಸ್ವಾಮಿ ಕಂಡಿದ್ದರು.

ತಲೆಮಾರಿನ ರಾಜಕೀಯ ಹಿನ್ನೆಲೆ ಸೊಕ್ಕೆ ಗ್ರಾಪಂ ಅಧ್ಯಕ್ಷೆ, ಟೆಕ್ಕಿ ಸ್ವಾತಿ ತಿಪ್ಪೇಸ್ವಾಮಿ ಅವರು ತಲೆಮಾರಿನ ರಾಜಕೀಯ ಹಿನ್ನೆಲೆ ಉಳ್ಳವರಾಗಿದ್ದಾರೆ. ಸ್ವಾತಿ ತಂದೆ ತಿಪ್ಪೇಸ್ವಾಮಿ ತಮ್ಮ ಕುಟುಂಬದ ರಾಜಕೀಯ ಹಿನ್ನೆಲೆಯನ್ನು ಹಂಚಿಕೊಳ್ಳುತ್ತಾ ಬ್ರಿಟಿಷರ್‌ ಆಡಳಿತಾವಧಿಯಲ್ಲಿ ನಮ್ಮ ತಾತ ತಿಪ್ಪಯ್ಯ ಸೊಕ್ಕೆ ಗ್ರಾಮದಲ್ಲಿ 1920-1931ರ ಅವಧಿಯಲ್ಲಿ ಕಂದಾಯ ಇನ್ಸಪೆಕ್ಟರ್‌ ಆಗಿ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ ನನ್ನ ಅಪ್ಪ ಜಿ. ಮದ್ದಾನಯ್ಯ 1965-1970 ರ ಅವಧಿಯವರೆಗೆ ಸೊಕ್ಕೆ ಪಂಚಾಯ್ತಿ ಚೇರಮನ್‌ ಆಗಿದ್ದರು. ಕಳೆದ ಅವಧಿಯಲ್ಲಿ ನಮ್ಮ ಸಂಬಂಧಿಕ ಎಚ್‌ ಎಂ ಕೊಟ್ರಯ್ಯ ಎರಡು ವರ್ಷ ಗ್ರಾಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

ಸೊಕ್ಕೆಯನ್ನು ತಾಲೂಕಿನಲ್ಲಿ ಮಾದರಿ ಪಂಚಾಯ್ತಿಯಾಗಿ ರೂಪಿಸುವ ಉದ್ದೇಶ ಹೊಂದಿದ್ದು ಇಲ್ಲಿನ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅಧ್ಯಯನ ಮಾಡಿ ಪೂರಕ ಕಾರ್ಯವಿಧಾನ ರೂಪಿಸಿಕೊಳ್ಳಬೇಕು. ಬಹಳಷ್ಟು ಕೆಲಸ ಆಗುವುದಕ್ಕಿದೆ.

ಗ್ರಾಮ ಪಂಚಾಯಿತಿಯಲ್ಲಿರುವ ಸೌಲಭ್ಯಗಳನ್ನು ಬಡವರಿಗೆ ದೊರಕುವಂತೆ ಮಾಡಿದರೆ ಸಾಕು, ಅಭಿವೃದ್ಧಿ ಸಾಧ್ಯ ಎನ್ನುವ ಧ್ಯೇಯವನ್ನು ಇಟ್ಟುಕೊಂಡಿದ್ದ ಸ್ವಾತಿಯವರು, ಪಂಚಾಯಿತಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಚುನಾವಣೆಗೂ ಸ್ಪರ್ಧಿಸಿದರು. ಉನ್ನತ ಶಿಕ್ಷಣ ಪಡೆದ ಸ್ವಾತಿ, ತಾಲೂಕಿನಲ್ಲೇ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅಲ್ಲದೆ ಸೊಕ್ಕೆ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಯಿತು. ಹೀಗಾಗಿ ವಿದ್ಯಾವಂತೆಯಾಗಿರುವ ಸ್ವಾತಿ ತಿಪ್ಪೇಸ್ವಾಮಿ ಅವರು ಅಧ್ಯಕ್ಷೆಯಾಗಿ ಸಹ ಆಯ್ಕೆಯಾಗಿದ್ದಾರೆ. ಸದ್ಯಕ್ಕೆ ನನ್ನ ಸಾಫ್ಟ್‌ವೇರ್‌ ಕೆಲಸದಿಂದ ಸಂಪೂರ್ಣ ಆಚೆ ಬಂದಿದ್ದು ಮಕ್ಕಳು ಮತ್ತು ಗ್ರಾಪಂ ಅಧ್ಯಕ್ಷಗಿರಿ ಇವುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಾಗಿ ಸೊಕ್ಕೆ ಗ್ರಾಪಂ ಅಧ್ಯಕ್ಷೆ ಸ್ವಾತಿ ತಿಪ್ಪೇಸ್ವಾಮಿ ತಿಳಿಸಿದ್ದಾರೆ. ಅಂದಹಾಗೆ ಸ್ವಾತಿ ತಂದೆ ತಿಪ್ಪೇಸ್ವಾಮಿ ಅವರು ಬೆಂಗಳೂರಿನ ವಿಧಾನಸೌಧದಲ್ಲಿ ನೌಕರರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿದ್ದಾರೆ. ಸ್ವಾತಿಯ ಪತಿ ಎಸ್‌.ಎಂ. ಸುಜಯ ಟೆಕ್ಕಿಯಾಗಿ ಬೆಂಗಳೂರಿನಲ್ಲಿದ್ದು, ಇಬ್ಬರು ಮಕ್ಕಳು ಇದ್ದಾರೆ.

Leave a Comment

error: Content is protected !!