ಲಂಚ ಕೊಡುವುದರಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತೇ?

ಸರಿಯಾದ ದಾರಿಯನ್ನು ಬಿಟ್ಟು ತಪ್ಪಾದ ದಾರಿಯಲ್ಲಿ ನಡೆಯುವುದು ಭ್ರಷ್ಟಾಚಾರ. ಇದರ ಅರ್ಥ ತಿಳಿಯೋದು ಎಷ್ಟು ಸುಲಭನೋ ಅಷ್ಟೇ ಕಷ್ಟ ಇದರ ಪರಿಣಾಮಗಳನ್ನ ತಿಳಿಯೋದು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 60 ವರ್ಷಕ್ಕೂ ಮೇಲೆಯೇ ಆಗಿದೆ. ದಿನದಿಂದ ದಿನಕ್ಕೆ ಭ್ರಷ್ಟಾಚಾರ ಹೆಚ್ಚುತ್ತಾ ಇದೆಯೇ ಹೊರತು, ಕಡಿಮೆ ಆಗುವ ಸುಳಿವು ಇಲ್ಲ. ಆಂಗ್ಲರು ನಮ್ಮ ದೇಶವನ್ನ ಆಳಿದ್ದು ಭ್ರಷ್ಟಾಚಾರವೇ. ಅವರನ್ನ ನಮ್ಮ ದೇಶದಿಂದ ತೊಲಗಿಸೋಕೆ ತಮ್ಮ ಜೀವನನ್ನ ಮುಡಿಪಾಗಿಟ್ಟವರು ಎಷ್ಟೋ ಜನ. ಎಷ್ಟೋ ಜನ ಸ್ವತಂತ್ರ್ಯ ಹೋರಾಟಗಾರರು ಇವತ್ತಿಗೂ ಆ ಘಟನೆಗಳಿಗೆ ಸಾಕ್ಷಿ ನೀಡ್ತಾರೆ. ತುಂಬಾನೆ ಕಷ್ಟಗಳನ್ನ ಅನುಭವಿಸಿ, ಎಷ್ಟೋ ತಲೆಗಳು ಉರುಳಿದ ಮೇಲೆ ನಮಗೆ ಸ್ವಾತಂತ್ರ್ಯ ಸಿಕ್ಕಿತು. ಆದರೆ ನಮಗೆ ಸ್ವಾತಂತ್ರ್ಯ ಸಿಕ್ಕಮೇಲೆ ಏನಾಯ್ತು? ಚಿಕ್ಕ ಪ್ರಮಾಣದಲ್ಲಿದ್ದ ಭ್ರಷ್ಟಾಚಾರ ಬೆಳೆಯೋದಕ್ಕೆ ಶುರು ಆಯ್ತು ಯಾಕೆ? ನಮ್ಮನ್ನ ಆಳೊಕ್ಕೆ ನೇಮಿಸಲ್ಪಟ್ಟ ನಾಯಕರು ಸರಿ ಇರಲಿಲ್ಲವಾ? ಅಥವಾ ಆ ನಾಯಕರನ್ನ ಆಯ್ಕೆ ಮಾಡಿದ ಜನರು ನಾವು ಸರಿ ಇರಲಿಲ್ಲವಾ? ಇದಕ್ಕೆ ಉತ್ತರ ನೋಡುವುದಾದರೆ ಇಬ್ಬರೂ ಸರಿ ಇರಲಿಲ್ಲ. ಅದಕ್ಕೆ ದಿನದಿಂದ ದಿನಕ್ಕೆ ಭ್ರಷ್ಟಾಚಾರ ಹೆಚ್ಚುತ್ತಾ ಬಂತು. ಲಂಚ ಕೊಡುವುದರಲ್ಲಿ ಇಂದು ನಮ್ಮ ದೇಶ ಭಾರತ ಏಷ್ಯಾದಲ್ಲೇ ನಂಬರ್ 1ಸ್ಥಾನ ಪಡೆದಿದ್ದು ಜಪಾನ್‌ ಮತ್ತು ನೇಪಾಳ ಕೊನೆಯ ಸ್ಥಾನದಲ್ಲಿವೆ. ಇದರ ಕುರಿತಾದ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಲಂಚ ಕೊಡುವುದರಲ್ಲಿ ಭಾರತ ಏಷ್ಯಾದಲ್ಲೇ ನಂಬರ್ ಒನ್ ಸ್ಥಾನ ಪಡೆದಿದ್ದು ಸಾರ್ವಜನಿಕ ಸೇವೆಗಾಗಿ ಶೇ.39ರಷ್ಟುಜನರಿಂದ ಲಂಚ ಪಾವತಿ ಮಾಡುತ್ತಾರೆ ಜಪಾನ್‌, ನೇಪಾಳಕ್ಕೆ ಕೊನೆಯ ಸ್ಥಾನ ಎಂದು ಟ್ರಾನ್ಸ್‌ಪರೆನ್ಸಿ ವರದಿ ಹೇಳಿಕೆ ನೀಡಿದೆ. ಸಾರ್ವಜನಿಕ ಸೇವೆ ಪಡೆಯಲು ಲಂಚ ನೀಡಬೇಕಾದ ಅನಿವಾರ್ಯತೆ ಹೆಚ್ಚಿರುವ ಏಷ್ಯಾದ ದೇಶಗಳ ಪೈಕಿ ಭಾರತ ಮೊದಲ ಸ್ಥಾನದಲ್ಲಿದೆ. ಜೊತೆಗೆ ಬಹಳಷ್ಟುಜನರು ಇಂಥ ಸೇವೆ ಪಡೆಯಲು ತಮ್ಮ ವೈಯಕ್ತಿಕ ಪರಿಚಯವನ್ನು ಬಳಕೆ ಮಾಡುತ್ತಾರೆ ಎಂದು ಭ್ರಷ್ಟಾಚಾರ ಕಣ್ಗಾವಲು ಸಂಸ್ಥೆಯಾದ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ ವರದಿ ತಿಳಿಸಿದೆ. ಈ ವರದಿಯ ಪ್ರಕಾರ, ಭಾರತದಲ್ಲಿ ಶೇ.39ರಷ್ಟುಜನರು ಸರ್ಕಾರಿ ಸೇವೆ ಪಡೆಯಲು ಲಂಚ ನೀಡಿದ್ದಾಗಿ ಹೇಳಿದ್ದಾರೆ. ಜೊತೆಗೆ ಶೇ.32 ರಷ್ಟು ಜನರು ಸರ್ಕಾರಿ ಸೇವೆ ಪಡೆಯಲು ತಮ್ಮ ವೈಯಕ್ತಿಕ ಸಂಪರ್ಕ ಬಳಸಿದ್ದಾಗಿ ತಿಳಿಸಿದ್ದಾರೆ. ಈ ಮೂಲಕ ಸಾರ್ವಜನಿಕ ಸೇವೆ ಪಡೆಯಲು ಲಂಚ ನೀಡಿಕೆ ಮತ್ತು ವೈಯಕ್ತಿಕ ಸಂಪರ್ಕ ಬಳಸುವುದರಲ್ಲಿ ಭಾರತ ಏಷ್ಯಾ ದೇಶಗಳ ಪೈಕಿ ಮೊದಲ ಸ್ಥಾನದಲ್ಲಿದೆ.

ಲಂಚ ನೀಡುವುದರಲ್ಲಿ ಕಾಂಬೋಡಿಯಾ (ಶೇ.37), ಇಂಡೋನೇಷ್ಯಾ (ಶೇ.30) ಭಾರತದ ನಂತರದ ಸ್ಥಾನದಲ್ಲಿವೆ. ಮಾಲ್ಡೀವ್ಸ್ ಮತ್ತು ಜಪಾನ್‌ (ತಲಾ ಶೇ.2), ದಕ್ಷಿಣ ಕೊರಿಯಾ (ಶೇ.10) ಹಾಗೂ ನೇಪಾಳ (ಶೇ.12) ಕೊನೆಯ ಸ್ಥಾನದಲ್ಲಿವೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ. ಸರ್ಕಾರಿ ಸೇವೆಗೆ ವೈಯಕ್ತಿಕ ಸಂಪರ್ಕ ಬಳಸುವುದರಲ್ಲಿ ಭಾರತದ ನಂತರ ಇಂಡೋನೇಷ್ಯಾ (ಶೇ.36) ಇದ್ದರೆ, ಜಪಾನ್‌ (ಶೇ.4) ಹಾಗೂ ಕಾಂಬೋಡಿಯಾ (ಶೇ.6) ಕೊನೆಯ ಸ್ಥಾನದಲ್ಲಿವೆ ಎಂದು ಹೇಳಿದೆ. ಜೂನ್ 17ರಿಂದ ಜುಲೈ 17ರ ಅವಧಿಯಲ್ಲಿ ದೇಶಾದ್ಯಂತ 2000 ಜನರನ್ನು ಸಂದರ್ಶಿಸಿ ಈ ವರದಿಯನ್ನೂ ಸಿದ್ಧಪಡಿಸಲಾಗಿದೆ. ಇದೇ ವೇಳೆ ಭ್ರಷ್ಟಾಚಾರ ನಿರ್ಮೂಲನೆಗೆ ದೂರು ನೀಡುವುದು ಮುಖ್ಯವಾದರೂ, ಅಂಥ ಕ್ರಮದಿಂದ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗಿ ಬರುತ್ತದೆ ಎಂದು ಶೇ.63ರಷ್ಟುಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಶೇಕಡಾ 89ರಷ್ಟುಜನರು ಸರ್ಕಾರದ ಭ್ರಷ್ಟಾಚಾರ ಅತಿದೊಡ್ಡ ಸಮಸ್ಯೆ ಎಂದು ಹೇಳಿದ್ದರೆ, ಶೇಕಡಾ.18ರಷ್ಟುಜನರು ಮತಕ್ಕಾಗಿ ಲಂಚ ನೀಡಿದ್ದಾಗಿ ಹೇಳಿದ್ದಾರೆ. ಶೇಕಡಾ 11 ರಷ್ಟು ತಮಗೆ ಪರಿಚಯ ಇರುವವರಿಂದಲೇ ಲೈಂಗಿಕ ಸುಲಿಗೆ ಕಿರುಕುಳ ಎದುರಿಸಿದ್ದಾಗಿ ಹೇಳಿದ್ದಾರೆ. ಶೇಕಡಾ 63ರಷ್ಟುಜನರು ಭ್ರಷ್ಟಾಚಾರ ನಿಗ್ರಹಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರೆ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಬಗ್ಗೆ ಇದೇ ರೀತಿಯ ಅಭಿಪ್ರಾಯವನ್ನು ಶೇಕಡಾ 73ರಷ್ಟುಜನರು ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸೇವೆಯಲ್ಲಿ ಲಂಚದ ಸಮಸ್ಯೆ ದೇಶವನ್ನು ಬಹುವಾಗಿ ಕಾಡುತ್ತಿದೆ. ಅಧಿಕಾರಶಾಹಿಯ ನಿಧಾನಗತಿ ಮತ್ತು ಸಂಕೀರ್ಣ ಪ್ರಕ್ರಿಯೆ, ಅನಗತ್ಯ ವಿಳಂಬ ಮತ್ತು ಅಸ್ಪಷ್ಟನಿಯಂತ್ರಣ ಚೌಕಟ್ಟುಗಳು ಸಾರ್ವಜನಿಕರು ತಮ್ಮ ಸೇವೆಯನ್ನು ಪಡೆಯಲು ಪರ್ಯಾಯ ಮಾರ್ಗ ಬಳಸುವಂತೆ ಮಾಡುತ್ತಿದೆ. ಇದನ್ನು ನಿವಾರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಡಳಿತವನ್ನು ಮತ್ತಷ್ಟುಸರಳೀಕರಣ ಮಾಡಬೇಕು. ಲಂಚ ಮತ್ತು ಸ್ವಜನಪಕ್ಷಪಾತ ನಿವಾರಿಸಲು ಕ್ರಮ ಕೈಗೊಳ್ಳಬೇಕು. ಬಳಕೆದಾರ ಸ್ನೇಹಿ ಆನ್‌ಲೈನ್‌ ವೇದಿಕೆ ಸೃಷ್ಟಿಸಬೇಕು ಮತ್ತು ಸೇವೆ ವಿತರಣೆ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಟ್ರಾನ್ಸ್‌ಪರೆನ್ಸಿ ಸಲಹೆ ನೀಡಿದೆ.

ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಡುವುದು ನಮ್ಮೆಲ್ಲರ ಕರ್ತವ್ಯ. ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ತಮ್ಮ ಕರ್ತವ್ಯವನ್ನ ಮರೆತಿರೋ ಹಾಗೆ ನಮ್ಮ ಕರ್ತವ್ಯವನ್ನ ನಾವು ಮರೆಯೊದು ಬೇಡ. ಮೊದಲು ನಮ್ಮ ದೇಶವನ್ನ ಸ್ವಚ್ಚ ಮಾಡೊಣ. ನಂತರ ಕ್ರಮೇಣ ಭ್ರಷ್ಟಾಚಾರ ಕೂಡ ಕಡಿಮೆಯಾಗುತ್ತದೆ. ಹೇಗೆ ಅಂತ ಕೇಳ್ತೀರ? ನಾವು ನಮ್ಮ ಕರ್ತವ್ಯಗಳನ್ನ ಸರಿಯಾಗಿ ಪಾಲಿಸಿದರೆ, ಪ್ರಶ್ನೇ ಕೆಳುವವರಾಗುತ್ತೇವೆ. ಪ್ರಶ್ನೇ ಕೇಳುವವರು ಜಾಸ್ತಿ ಆದಾಗ, ತಪ್ಪು ಮಾಡುವವರ ಸಂಖ್ಯೆಯೂ ಸಹ ಕಡಿಮೆಯಾಗುತ್ತದೆ.

Leave a Comment

error: Content is protected !!