ಡಾಬಾ ಹೋಟಲ್ ಶೈಲಿಯಲ್ಲಿ ಪಾಲಕ್ ದಾಲ್ ಮಾಡುವ ಸುಲಭ ವಿಧಾನ

ಪಾಲಕ್ ಸೊಪ್ಪು ನಮ್ಮ ದೇಹಕ್ಕೆ ಅಗತ್ಯವಾದ ಹಲವಾರು ಪೋಷಕಾಂಶಗಳನ್ನು ಹೊಂದಿರುವ ಸೊಪ್ಪು. ಮುಖ್ಯವಾಗಿ ನಮ್ಮ ದೇಹಕ್ಕೆ ಬೇಕಾಗಿರುವ ಕಬ್ಬಿಣದ ಅಂಶ ಹೆಚ್ಚು ಆಗಲು ಇದು ಸಹಾಯ ಮಾಡುತ್ತದೆ. ಕೆಲವರಿಗೆ ನೇರವಾಗಿ ಪಾಲಕ್ ಸೊಪ್ಪನ್ನು ತಿನ್ನೋಕೆ ಇಷ್ಟ ಆಗಲ್ಲ ಹಾಗಾಗಿ ಅದರಿಂದ ಪಲ್ಯ, ಸಾರು ಈ ರೀತಿಯ ಪದಾರ್ಥಗಳನ್ನು ಮಾಡಿ ತಿನ್ನುತ್ತಾರೆ ಅದೇ ರೀತಿ ಬೇಳೆಯ ಜೊತೆಗೂ ಸಹ ಪಾಲಕ್ ಸೊಪ್ಪನ್ನು ಬಳಸಿ ವಿಧವಿಧವಾದ ಅಡುಗೆಯನ್ನು ಮಾಡಬಹುದು. ಹಾಗಾಗಿ ಇವತ್ತಿನ ರೆಸಿಪಿ ದಾಲ್ ಪಾಲಕ್.

ದಾಲ್ ಪಾಲಕ್ ಈ ರೆಸಿಪಿ ಮಾಡೋಕೆ ಏನೆಲ್ಲಾ ಬೇಕು ಹಾಗೂ ಮಾಡೋದು ಹೇಗೆ ಅನ್ನೋದನ್ನ ನೋಡೋಣ.

ಬೇಕಾಗುವ ಸಾಮಗ್ರಿಗಳು :ತೊಗರಿ ಬೇಳೆ ಒಂದು ಕಪ್, ಜೀರಿಗೆ, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಎಣ್ಣೆ, ಈರುಳ್ಳಿ ೧, ಟೊಮೆಟೊ ೧, ಪಾಲಕ್ ಸೊಪ್ಪು 2 ಕಟ್ಟು, ಕೆಂಪು ಮೆಣಸಿನ ಪುಡಿ ಒಂದು ಟೀ ಸ್ಪೂನ್, ಉಪ್ಪು, ಅರಿಶಿನ

ಮಾಡುವ ವಿಧಾನ :ಒಂದು ಕುಕ್ಕರ್ ಗೆ ಒಂದು ಕಪ್ ಬೇಳೆಯನ್ನು ತೊಳೆದು ಸುಮಾರು ಒಂದು ಗಂಟೆಗಳ ಕಾಲ ನೆನೆಸಿ ಅದನ್ನ ಕುಕ್ಕರ್ ಗೆ ಹಾಕಿ, ಒಂದು ಟೀ ಸ್ಪೂನ್ ಎಣ್ಣೆ, ಒಂದೂವರೆ ಕಪ್ ನೀರು ಹಾಕಿ ಕುಕ್ಕರ್ ಲಿಡ್ ಮುಚ್ಚಿ ೩/೪ ವಿಸಿಲ್ ಕೂಗಿಸಿ ಕೊಳ್ಳಬೇಕು. ನಂತರ ಒಂದು ಪ್ಯಾನ್ ಎರಡು ಟೀ ಸ್ಪೂನ್ ಎಣ್ಣೆ ಹಾಕಿ ಕಾದ ನಂತರ ಅರ್ಧ ಟೀ ಸ್ಪೂನ್ ಜೀರಿಗೆ, ಎರಡು ಕತ್ತರಿಸಿದ ಹಸಿಮೆಣಸಿನಕಾಯಿ, ಹಾಗೂ ೭-೮ ಎಸಳು ಬೆಳ್ಳುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಬೇಕು. ನಂತರ ಚಿಕ್ಕದಾಗಿ ಕಟ್ ಮಾಡಿದ ಒಂದು ಈರುಳ್ಳಿಯನ್ನು ಸೇರಿಸಿ ಫ್ರೈ ಮಾಡಿಕೊಳ್ಳಬೇಕು. ನಂತರ ಚಿಕ್ಕದಾಗಿ ಕತ್ತರಿಸಿದ ಟೊಮೆಟೊ ಸೇರಿಸಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ನಂತರ ಕಟ್ ಮಾಡಿದ ಪಾಲಕ್ ಸೊಪ್ಪನ್ನು ಸೇರಿಸಿ ನೀರು ಹಾಕದೆ ಹಾಗೇ ಬೇಯಿಸಿಕೊಳ್ಳಬೇಕು. ಪಾಲಕ್ ಸೊಪ್ಪು ಬೇಯಿಸಿದ ಹಾಗೇ ಅದಾಗಿಯೇ ನೀರು ಬಿಟ್ಟುಕೊಳ್ಳತ್ತೆ ಹಾಗಾಗಿ ನೀರು ಸೇರಿಸುವುದು ಬೇಕಾಗಿಲ್ಲ. ಒಂದು ಮುಚ್ಚಳ ಮುಚ್ಚಿ ೪/೫ ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ನಂತರ ಕುಕ್ಕರಿನಲ್ಲಿ ಬೇಯಿಸಿ ಇಟ್ಟುಕೊಂಡ ತೊಗರಿ ಬೇಳೆಯನ್ನು ಸೇರಿಸಿ ಮಿಕ್ಸ್ ಮಾಡಿ ಅದಕ್ಕೆ ಅರ್ಧ ಟೀ ಸ್ಪೂನ್ ಅರಿಶಿನ, ಕೆಂಪು ಮೆಣಸಿನ ಪುಡಿ ಹಾಗೇ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಾಗೇ ಹದ ನೋಡಿಕೊಂಡು ನೀರು ಬೇಕಿದ್ರೆ ನೀರು ಸೇರಿಸಿ ಇಲ್ಲವಾದರೆ ಹಾಗೇ ಬಿಟ್ಟು ಒಂದು ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ೬/೭ ನಿಮಿಷ ಕುದಿಯಲು ಬಿಡಿ. ಒಂದೆರಡು ಕುದಿ ಬಂದ ನಂತರ ಸ್ಟೋವ್ ಆಫ್ ಮಾಡಿದರೆ ಬಿಸಿ ಬಿಸಿಯಾದ ದಾಲ್ ಪಾಲಕ್ ಅನ್ನ, ರೊಟ್ಟಿ ಅಥವಾ ಚಪಾತಿ ಜೊತೆ ಸವಿಯೋಕೆ ರೆಡಿ.

Leave a Comment

error: Content is protected !!