ಜೀವನದಲ್ಲಿ ಟೀಚರ್ ಆಗಬೇಕು ಅಂದುಕೊಂಡಿದ್ರು ಆದ್ರೆ ಆಗಿದ್ದೆ ಬೇರೆ

ಸಾಕಷ್ಟು ಜನರು ತಮ್ಮ ಜೀವನದಲ್ಲಿ ತಾವು ಮುಂದೆ ಎನು ಆಗಬೇಕು? ಹೀಗೆಯೇ ಬದುಕಬೇಕು ಎಂದೆಲ್ಲ ಏನೇನೋ ಕನಸು ಕಟ್ಟಿಕೊಂಡಿರುತ್ತಾರೆ. ಆದರೆ ಕೆಲವರ ಜೀವನದಲ್ಲಿ ಅವರು ಅಂದುಕೊಂಡಿದ್ದು ಆದರೆ ಇನ್ನು ಕೆಲವರ ಜೀವನದಲ್ಲಿ ಅವರವರು ಅಂದುಕೊಂಡಿದ್ದು ಆಗುವುದೇ ಇಲ್ಲ ಇನ್ನೂ ಕೆಲವರ ಜೀವನದಲ್ಲಿ ಅವರೇನು ಆಗಬೇಕು ಅಂದುಕೊಂಡಿರುತ್ತಾರೋ ಅದಕ್ಕೆ ವ್ಯತಿರಿಕ್ತವಾಗಿ ಬೇರೆ ಇನ್ನೇನೋ ಆಗಿರುತ್ತಾರೆ. ಅದೇ ರೀತಿ ಸುರೇಖಾ ಯಾದವ್ ಎಂಬವರ ಜೀವನದಲ್ಲಿಯೂ ನಡೆದಿದ್ದು ಹಾಗೆಯೇ. ಟೀಚರ್ ಆಗಬೇಕು ಎಂದುಕೊಂಡಿದ್ದ ಸುರೇಖಾ ಕೊನೆಗೆ ಆಗಿದ್ದು ಲೋಕೋ ಪೈಲಟ್. ಟೀಚರ್ ಆಗಬೇಕಿದ್ದ ಸುರೇಖಾ ಲೋಕೋ ಪೈಲಟ್ ಆಗಿದ್ದು ಹೇಗೆ ಎನ್ನುವ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮಹಾರಾಷ್ಟ್ರದ ಸತಾರಾದಲ್ಲಿ ಜನಿಸಿದ ಸುರೇಖಾ ಯಾದವ್ ಅವರು ಬಾಲ್ಯದಲ್ಲಿಯೇ ಕ್ರೀಡೆಯಲ್ಲಿ ಬಹಳ ಮುಂದೆ ಇದ್ದರು. ಹಾಗೂ ಇವರು ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಪದವೀಧರೆ. ಇವರು ಬದುಕಿನ ಕನಸು ಕಟ್ಟಿದ್ದು ತಾನು ಒಬ್ಬ ಉತ್ತಮ ಟೀಚರ್ ಆಗಬೇಕು ಎಂದ್ದಾಗಿತ್ತು ಆದರೆ, ಹಣೆಬರಹದಲ್ಲಿ ದೇವರು ಅವರಿಗೆ ಎಂದು ಬೇರೆಯದ್ದೆ ಉದ್ಯೋಗ ಬರೆದಿದ್ದ. ಅದರಂತೆ 1987 ರಲ್ಲಿ ರೈಲ್ವೇ ಪರೀಕ್ಷೆಗಳನ್ನು ಬರೆದು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ರೈಲ್ವೇ ಇಲಾಖೆಯಲ್ಲಿ ಲೋಕೋ ಪೈಲಟ್ ಆಗಿ ನೇಮಕಗೊಳ್ಳುವ ಮೂಲಕ ಭಾರತದ ಪ್ರಥಮ ಲೋಕೋ ಪೈಲಟ್ ಆಗುತ್ತಾರೆ. ಸುರೇಖಾ ಯಾದವ್ ಅವರು ಮೂವತ್ತು ವರ್ಷಗಳ ಹಿಂದೆ ಇಂಡಿಯನ್ ರೈಲ್ವೆಯಲ್ಲಿ ಲೋಕೋ ಪೈಲಟ್ ಆಗಿ ತಮ್ಮ ಕಾರ್ಯ ನಿರ್ವಹಿಸಲು ಆರಂಭಿಸಿದರು. ಇವರ ಸಾಧನೆಯೇ ಉಳಿದೆಲ್ಲ ಮಹಿಳಾ ಲೋಕೋ ಪೈಲಟ್ಗಳಿಗೂ ಸ್ಫೂರ್ತಿ ಅಂದ್ರೆ ಖಂಡಿತ ತಪ್ಪಾಗಲಾರದು. ಹೆಣ್ಣು ಮಕ್ಕಳು ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುವುದು ಅಷ್ಟೊಂದು ಸುಲಭದ ಕೆಲಸ ಏನೂ ಅಲ್ಲ. ಅನೇಕ ಸವಾಲುಗಳ ನಡುವೆ ಸುಮಾರು ಮೂವತ್ತು ವರ್ಷ ಇವರು ಕಳೆದದ್ದು ಅಚ್ಚರಿಯೇ ಸರಿ. ಗೂಡ್ಸ್ ರೈಲು, ಪ್ಯಾಸೆಂಜರ್ ರೈಲುಗಳಿಗೆ ಚಾಲಕಿಯಾಗಿ, ತನ್ನ ಕಾರ್ಯವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಾರೆ.

ಸುರೇಖಾ ಯಾದವ್ ಅವರ ಇನ್ನೊಂದು ಹಿರಿಮೆ ಎಂದರೆ 2010 ರಲ್ಲಿ ಪುರುಷರಿಗೆ ಸವಾಲಾಗಿರುವ ಘಾಟ್ ರೈಲ್ವೆಯಲ್ಲಿ ಕಾರ್ಯ ನಿರ್ವಹಿಸಿರುವುದು. ಈ ಜವಾಬ್ದಾರಿಯನ್ನು ಸುರೇಖಾ ಯಾದವ್ ಅವರು ನಿರ್ವಹಿಸುವ ಮುನ್ನ ಓರ್ವ ಮಹಿಳೆಯಾಗಿ ಇದನ್ನು ಸಮರ್ಥವಾಗಿ ನಿರ್ವಹಿಸಬಲ್ಲರೆ? ಎಂಬ ಪ್ರಶ್ನೆ ಅಧಿಕಾರಿಗಳಲ್ಲಿ ಇದ್ದಿತ್ತು. ಆದರೆ ಸುರೇಖಾ ಅವರು ಅಧಿಕಾರಿಗಳ ಮಾತನ್ನು ಹುಸಿಗೊಳಿಸಿ ಅವರ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಭೇಷ್ ಎನ್ನಿಸಿಕೊಂಡರು. ಅಲ್ಲದೇ 2000ರಲ್ಲಿ ಮಮತಾ ಬ್ಯಾನರ್ಜಿ ಉದ್ಘಾಟಿಸಿದ ಲೇಡಿ ಸ್ಸ್ಪೆಷಲ್ ಟ್ರೈನಿನ ಮೊದಲ ಚಾಲಕಿಯಾದ ಹೆಮ್ಮೆಯೂ ಇವರಿಗಿದೆ.
ಇನ್ನು ಸುರೇಖಾ ಅವರಿಗೆ 2011ರ ಮಹಿಳಾ ದಿನದಂದು ಏಷ್ಯಾದ ಮೊದಲ ರೈಲು ಚಾಲಕಿ ಎಂಬ ಬಿರುದನ್ನೂ ನೀಡಲಾಗಿದೆ. 2011ರಲ್ಲಿ ಇವರಿಗೆ ಉನ್ನತ ಹುದ್ದೆಗೆ ಬಡ್ತಿಯೂ ಸಿಕ್ಕಿದೆ. ಅಲ್ಲದೆ, ಇವರೀಗ ರೈಲು ಚಾಲನೆಗೆ ಸಂಬಂಧಿಸಿದಂತೆ ಟ್ರೈನಿಂಗ್ ನೀಡುತ್ತ ತನ್ನ ಬಾಲ್ಯದ ಟೀಚರ್ ಕನಸನ್ನು ಈ ಮೂಲಕ ನೆರವೇರಿಸಿಕೊಂಡಿದ್ದಾರೆ. ಇವರಿಂದ ಸ್ಫೂರ್ತಿಗೊಂಡು ಸದ್ಯ ಭಾರತೀಯ ರೈಲ್ವೇಯಲ್ಲಿ ಸುಮಾರು 50ಕ್ಕೂ ಅಧಿಕ ಮಹಿಳಾ ಲೋಕೋ ಪೈಲಟ್ ಗಳು ಕಾರ್ಯ ನಿರ್ವಹಿಸುತ್ತಾ ಇದ್ದಾರೆ. ಸುರೇಖಾ ಯಾದವ್ ಅವರು ಸಾಧನೆ ಮಾಡುವ ಹಂಬಲ ಇದ್ದರೆ ಯಾವುದೂ ಅಡ್ಡಿಯಲ್ಲ ಎಂಬುದನ್ನು ತಮ್ಮ ಬದುಕಿನ ಮೂಲಕವೇ ತೋರಿಸಿಕೊಟ್ಟು ಸಾಧನೆಯ ಕನಸು ಹೊತ್ತವರಿಗೂ ಮಾದರಿಯಾಗಿದ್ದಾರೆ.

Leave a Comment

error: Content is protected !!