ಈ ಆಟಗಾರ್ತಿಯ ಸಾಧನೆ ಹೆಸರಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಗೆ ಆಕೆಯ ತಾಯಿಯೇ ದಿನಗೂಲಿ ಕೆಲಸ ಮಾಡುತ್ತಿದ್ದಾರೆ

‘ದೀಪದ ಬುಡದಲ್ಲಿ ಕತ್ತಲೆ’ ಎಂಬಂತೆ ಸಾಧಕರ ಬುಡದಲ್ಲಿ ಕಷ್ಟಗಳು ನೂರಾರಿರುತ್ತವೆ. ಭಾರತದ ಮಹಿಳಾ ಫುಟ್ಬಾಲ್ ತಂಡದ ಆಟಗಾರ್ತಿ ಅಷ್ಟಮ್ ಓರಾನ್, ಬಡ ಕುಟುಂಬ ಒಂದರಲ್ಲಿ ಜನಿಸಿ ಭಾರತದ ಪರ ಮುಂಬರುವ ವಿಶ್ವಕಪ್ ನಲ್ಲಿ ನಾಯಕಿಯಾಗಿ ಸೆಣದಾಡಲಿದ್ದಾರೆ. ಇವರ ಸಾಧನೆಯನ್ನು ಮೆಚ್ಚಿ ಏಐಎಫ್ಎಫ್ ಇವರನ್ನು ಕ್ಯಾಪ್ಟನ್ ಆಗಿ ಘೋಷಿಸಿದ ನಂತರ ಜಾರ್ಖಂಡ್ ಸರ್ಕಾರವು ಇವರ ಹೆಸರಲ್ಲಿ ಇವರ ಹುಟ್ಟೂರಿಗೆ ನೂತನ ರಸ್ತೆ ಮಾಡಿಕೊಡುವುದಾಗಿ ಘೋಷಿಸಿತು.

ಅಂದ ಹಾಗೆ ಅಷ್ಟಮ್ ಓರಾನ್ ಇವರು ಝಾರ್ಖಂಡದ ಗುಮ್ಲಾ ಎಂಬ ಚಿಕ್ಕ ಹಳ್ಳಿಯವರು. ತಂದೆ ತಾಯಿ ದಿನಗೂಲಿ ಕೆಲಸ ಮಾಡಿ ಬದುಕುತ್ತಿರುವವರು. ಇವರ ಹಳ್ಳಿಗೆ ಈ ವರೆಗೆ ಯಾವುದೇ ನೂತನ ರಸ್ತೆಯ ವ್ಯವಸ್ಥೆ ಇರಲಿಲ್ಲ. ಇಂಟರ್ನೆಟ್, ಟಿವಿ ಸೌಲಭ್ಯಗಳು ತುಂಬಾ ವಿರಳ. ಸರ್ಕಾರವು ಸೌಲಭ್ಯವನ್ನು ಘೋಷಿಸಿದ ನಂತರ ಇವರ ಹಳ್ಳಿಯಲ್ಲಿ ಟಿವಿಯನ್ನು ಹೊಂದಿದ ಮೊದಲ ಮನೆ ಇವರದೇ. ಮುಂಬರುವ ಪಂದ್ಯದಲ್ಲಿ ಅಮೆರಿಕವನ್ನು ಎದುರಿಸಲಿರುವ ಭಾರತ ತಂಡವು ಅಷ್ಟಮ್ ಓರಾನ್ ಇವರ ಮುಂದಾಳತ್ವವನ್ನು ಹೊಂದಿದೆ.

ಇಂತಹ ಕಷ್ಟದ ಹಾದಿಯನ್ನು ತುಳಿದು ತನ್ನ ಹಳ್ಳಿಯ ಹೆಸರನ್ನು ದೇಶ ಮಟ್ಟದಲ್ಲಿ ಪ್ರಸರಿಸಿದ ಈ ಆಟಗಾರ್ತಿಯ ಹೆಸರಿನಲ್ಲಿ ನಿರ್ಮಿಸುತ್ತಿರುವ ರಸ್ತೆ ಕಾರ್ಯಗಳು, ಅವರ ಹಳ್ಳಿಯಲ್ಲಿ ಭರದಿಂದ ಸಾಗಿದೆ. ಭಾವುಕರಾಗುವ ಸಂಗತಿ ಎಂದರೆ ಸ್ವತಃ ಈಕೆಯ ತಂದೆ-ತಾಯಿ ಮತ್ತು ಸಹೋದರರು ಆ ರಸ್ತೆಯ ನಿರ್ಮಾಣ ಕಾರ್ಯದಲ್ಲಿ ದಿನಗೂಲಿ ಕೆಲಸವನ್ನು ಮಾಡುತ್ತಿದ್ದಾರೆ. ತಂದೆಯನ್ನು ಈ ವಿಚಾರವಾಗಿ ಪ್ರಶ್ನಿಸಿದಾಗ ‘ದಿನದ ಹೊಟ್ಟೆಪಾಡಿನ ಖರ್ಚು ಆ ದಿನದ ಕೆಲಸದಿಂದಲೇ ಹುಟ್ಟಬೇಕು ನಮಗೆ’ ಎಂದಿದ್ದಾರೆ. ಈ ವರೆಗೆ ಆಕೆಯ ಪಂದ್ಯವನ್ನು ಆಕೆಯ ತಂದೆ, ತಾಯಿ, ಪೋಷಕರು, ಗ್ರಾಮಸ್ಥರು ಕ್ರೀಡಾಂಗಣದಲ್ಲಿ ನೋಡಿಲ್ಲವೆಂಬ ನೋವಿನ ಸಂಗತಿಯನ್ನು ತಿಳಿದ ಜಿಲ್ಲಾಧಿಕಾರಿಗಳು, ಮುಂಬರುವ ಪಂದ್ಯವನ್ನು ನೋಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅಲ್ಲದೆ ಎಲ್ಲರಿಗೂ ಮಾದರಿಯಾಗುವಂತಹ ಹಾದಿಯಲ್ಲಿ ನಡೆದು ಬಂದ ಈಕೆಯ ಹೆಸರಲ್ಲಿ ಕ್ರೀಡಾಂಗಣ ಒಂದನ್ನು ನಿರ್ಮಿಸಲು ನಿರ್ಧರಿಸಿದ್ದಾರಂತೆ.

ಈ ಹೆಮ್ಮೆಯ ಆಟಗಾರ್ತಿಯ ಬಗ್ಗೆ ಆಕೆಯ ತಾಯಿಯಲ್ಲಿ ಕೇಳಿದಾಗ ‘ಚಿಕ್ಕಂದಿನಿಂದಲೂ ನನ್ನ ಮಗಳಿಗೆ ಆಟದಲ್ಲಿ ತುಂಬಾ ಆಸಕ್ತಿ. ನಂತರ ಫುಟ್ಬಾಲ್ ನಲ್ಲಿ ಸತತ ಪ್ರಯತ್ನದಿಂದ ಆಕೆಯ ಆಸೆಯಂತೆ, ಇಂದು ನಾಯಕಿಯಾಗಿದ್ದಾಳೆ. ಇದು ನನಗಷ್ಟೇ ಅಲ್ಲದೆ ನನ್ನ ಗ್ರಾಮದವರಿಗೂ ಹೆಮ್ಮೆಯ ವಿಚಾರವಾಗಿದೆ. ಹಾಲು, ಹಣ್ಣುಗಳನ್ನು ತಿನಿಸಿ ನನ್ನ ಮಗಳನ್ನು ಬೆಳೆಸಲು ಸಾಧ್ಯವಿರದ ಪರಿಸ್ಥಿತಿ ನಮ್ಮದು. ಆಕೆ ನೀರು, ಅನ್ನ, ಗಂಜಿಯನ್ನೇ ತಿಂದು ಬೆಳೆದವಳು. ಒಮ್ಮೆ ಆಕೆ ಹಣ ಗಳಿಸಲು ಪ್ರಾರಂಭಿಸಿದರೆ ಇಷ್ಟು ವರ್ಷದ ನನ್ನ ದುಡಿಮೆಗೆ ವಿರಾಮ ಕೊಡಬೇಕೆಂದಿದ್ದೇನೆ’ ಎಂದು ಭಾವುಕರಾಗಿ ನುಡಿದಿದ್ದಾರೆ. ಈ ರೀತಿಯಾಗಿ ಸೌಲಭ್ಯಗಳೇ ಇಲ್ಲದ ಊರಿನಿಂದ ಎದ್ದು ಬಂದು, ಭಾರತದ ಫುಟ್ಬಾಲ್ ತಂಡವನ್ನು ಪ್ರತಿನಿಧಿಸುತ್ತಿರುವ ಅಷ್ಟಾಮ್ ಒರಾನ್ ಇವರಿಗೆ ಎಲ್ಲರಿಂದ ಶುಭ ಹಾರೈಕೆಗಳು ಸದಾ ಇರಲಿ

Leave a Comment

error: Content is protected !!