ಪುನೀತ್ ರಾಜಕುಮಾರ್ ಅವರ ಅಗಾಧ ಭಕ್ತಿಯನ್ನು ಮೆಚ್ಚಿ, ಸಾಧನೆಗೆ ಆಶೀರ್ವದಿಸಿದ ಅವರ ಆರಾಧ್ಯ ದೈವದ ಬಗ್ಗೆ ಗೊತ್ತಾ??

ಸಾಮಾನ್ಯ ಜನರಿಂದ ಹಿಡಿದು ದೊಡ್ಡ ದೊಡ್ಡ ಸಾಧಕರವರೆಗೂ ದೇವರ ಶಕ್ತಿಯಲ್ಲಿ ನಂಬಿಕೆ ಇರುತ್ತದೆ. ದೇವರಿಗೆ ತಲೆಬಾಗಿ ಆಶೀರ್ವಾದವನ್ನು, ರಕ್ಷಣೆಯನ್ನು ಎಲ್ಲರೂ ಬೇಡಿಕೊಳ್ಳುತ್ತಾರೆ. ಕಾರ್ಯದಲ್ಲಿ ನಿಷ್ಠೆಯನ್ನು ಹೊಂದಿ, ಭಕ್ತಿ ಭಾವದಿಂದ ದೇವರನ್ನು ನೆನೆದರೆ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ, ಆಸೆಗಳು ಈಡೇರುತ್ತವೆ. ಮಾನವ ತನ್ನ ಗುರಿಯನ್ನು ತಲುಪಲು ಛಲ, ಸತತ ಪ್ರಯತ್ನದೊಂದಿಗೆ ದೇವರ ಆಶೀರ್ವಾದವೂ ಬೇಕು.

ಕನ್ನಡಿಗರ ನೆಚ್ಚಿನ ‘ಬಂಗಾರದ ಮನುಷ್ಯ’ರಾದ ಡಾಕ್ಟರ್ ರಾಜಕುಮಾರ್ ಅವರ ಪುತ್ರನಾಗಿ ಜನಿಸಿದ ಪುನೀತ್ ರಾಜಕುಮಾರ್ ಅವರಿಗೆ ತಂದೆಯಂತೆ ದೇವರಲ್ಲಿ ಅಪಾರವಾದ ಭಕ್ತಿಯಿತ್ತು. ಕನ್ನಡ ಚಿತ್ರರಂಗದಲ್ಲಿ ಬಾಲ್ಯ ನಟರಾಗಿ, ಸುಂದರ ಹಾಡುಗಳ ಗಾಯಕರಾಗಿ, ಜನ ಮೆಚ್ಚಿದ ಚಿತ್ರಗಳ ನಿರ್ದೇಶಕರಾಗಿ, ಉತ್ತಮ ಕಥೆಯುಳ್ಳ ಚಿತ್ರಕ್ಕೆ ನಾಯಕರಾಗಿ ನಟಸಾರ್ವಭೌಮ ಅಪ್ಪು ಅವರನ್ನು ನೋಡಿದ್ದೇವೆ. ಬಡವರಿಗೆ, ವಿದ್ಯಾರ್ಥಿಗಳಿಗೆ ಸಹಾಯ ಮಾಡಿ ಹೃದಯವಂತಿಕೆ ಮೆರೆದ ‘ದೊಡ್ಮನೆ ಹುಡುಗ’ನನ್ನು ಕಂಡಿದ್ದೇವೆ.

ಅಲ್ಲದೆ ದೇವರಲ್ಲಿ ಅಪಾರವಾದ ಶ್ರದ್ಧೆ ಭಕ್ತಿ ನಂಬಿಕೆಯನ್ನು ತುಂಬಿಕೊಂಡ ಮಾನವನಾಗಿ ಕರ್ನಾಟಕವು ಪುನೀತ್ ರಾಜಕುಮಾರ್ ಅವರನ್ನು ಕಂಡಿದೆ. ಸದಾಕಾಲ ಚಿತ್ರೀಕರಣದಲ್ಲಿ ತೊಡಗಿಕೊಂಡಿರುತ್ತಿದ್ದ ಪುನೀತ್ ರಾಜಕುಮಾರ್ ಅವರು ಬಿಡುವಿನ ವೇಳೆಯಲ್ಲಿ ಚಿತ್ರೀಕರಣದ ಸುತ್ತಮುತ್ತಲ ಹಳ್ಳಿಗಳಿಗೆ ಭೇಟಿ ನೀಡಿ, ಅಲ್ಲಿಯ ದೇವಾಲಯಗಳಿಗೆ ಹೋಗಿ ದೇವರ ದರ್ಶನ ಪಡೆದು ಬರುತ್ತಿದ್ದರು. ಮಠಗಳಿಗೂ ತೆರಳಿ ಭಕ್ತಿಯಿಂದ ಗುರುಗಳ ಆಶೀರ್ವಾದವನ್ನು ಪಡೆಯುತ್ತಿದ್ದರು. ತಿರುಪತಿ ವೆಂಕಟೇಶ್ವರ ದೇವಸ್ಥಾನ, ಮೈಸೂರಿನ ಚಾಮುಂಡಿ ಬೆಟ್ಟ, ಧಾರವಾಡದ ಆಂಜನೇಯ ಸ್ವಾಮಿ ದೇವಾಲಯ, ಶಬರಿಮಲೆಯ ಅಯ್ಯಪ್ಪ ಸ್ವಾಮಿ ಸೇರಿದಂತೆ ಹಲವಾರು ಮಂದಿರಗಳಲ್ಲಿ ಪೂಜೆಯನ್ನು ನೆರವೇರಿಸಿದ್ದಾರೆ.

ಅಪ್ಪು ಅವರ ಆರಾಧ್ಯ ದೈವವೆಂದರೆ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು. ಆಗಾಗ ಅಲ್ಲಿಗೆ ಭೇಟಿ ನೀಡಿ ಇಷ್ಟಾರ್ಥಗಳನ್ನು ನೆರವೇರಿಸುವಂತೆ ದೇವರಲ್ಲಿ ಬೇಡಿಕೊಂಡು, ಪೂಜೆಯನ್ನು ಸಲ್ಲಿಸಿ, ಹಾಡುಗಳನ್ನು ಹಾಡಿ ಬರುತ್ತಿದ್ದರು. ಡಾಕ್ಟರ್ ರಾಜಕುಮಾರ್ ಅವರ ಕುಟುಂಬದವರೆಲ್ಲರಿಗೂ ರಾಘವೇಂದ್ರ ಸ್ವಾಮಿಗಳೆಂದರೆ ಎಲ್ಲಿಲ್ಲದ ಭಕ್ತಿ, ನಂಬಿಕೆ.

ಒಮ್ಮೆ ಪುನೀತ್ ರಾಜಕುಮಾರ್ ಅವರು ರಾಘವೇಂದ್ರ ಸ್ವಾಮಿಗಳ ಪೂಜಾ ಪ್ರಸಾದಗಳಿಗಾಗಿ ಮಂತ್ರಾಲಯಕ್ಕೆ ಭೇಟಿ ನೀಡಿದಾಗ ಡಾಕ್ಟರ್ ರಾಜಕುಮಾರ್ ಅವರು ಹಾಡಿದ ‘ವಾರ ಬಂತಮ್ಮ ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮ’ ಎಂದು ತಮ್ಮ ಸುಮಧುರವಾದ ಕಂಠದಿಂದ ಭಕ್ತಿ ಪರವಶರಾಗಿ ಹಾಡಿದರು. ಸ್ವಾಮಿಗಳ ಆಶೀರ್ವಾದವೇ ಪುನೀತ್ ರಾಜಕುಮಾರ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಸಾಧನೆಗೈದು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳ ಮನೆಗೆಲ್ಲಲು ಕಾರಣವಾಯಿತು.

Leave a Comment

error: Content is protected !!