52 ವರ್ಷದ ಮೇಸ್ಟ್ರಿಗೆ ಮದುವೆಯಾಗಿ ಎಂದ 20 ವರ್ಷದ ಮಧುಬಾಲೆ..!! ಪಾಕಿಸ್ತಾನ ವಿದ್ಯಾರ್ಥಿನಿಯ ಪ್ರೇಮಕಹಾನಿ…

ಯಾವಾಗ? ಯಾರಿಗೆ? ಯಾರೊಂದಿಗೆ? ಆಕರ್ಷಣೆಯಾಗುತ್ತೆ ಅನ್ನೋದು ತಿಳಿಯದ ವಿಚಾರ. ಇತ್ತೀಚಿಗೆ ಹದಿಹರೆಯದ ಬಾಲಕ ವಯಸ್ಸು ಮೀರಿದ ಹೆಂಗಸಿನೊಂದಿಗೆ, ಬಾಲಕಿ ಮುದುಕನೊಂದಿಗೆ ಪ್ರೀತಿಸಿ, ಮದುವೆಯಾಗಿ, ಸಂಸಾರ ನಡೆಸುತ್ತಿರುವ ಉದಾಹರಣೆಗಳು ಬೆರಳೆಣಿಕೆಗಿಂತ ಜಾಸ್ತಿ. ದಾರಿಯಲ್ಲಿ ದಿನವೂ ನೋಟ ಬೀರುವವರ ಮೇಲೆ, ಸಮಾರಂಭಗಳಲ್ಲಿ ಸಿಕ್ಕು ಮಾತನಾಡಿದವರ ಮೇಲೆ, ಭೇಟಿಯೇ ಆಗದೆ ಸಾಮಾಜಿಕ ಜಾಲತಾಣಗಳಲ್ಲಷ್ಟೇ ಸಂದೇಶ ಕಳುಹಿಸುವವರ ಮೇಲೆ ಪ್ರೀತಿ ಚಿಗುರೊಡೆದು, ಹೆಮ್ಮರವಾಗಿ ಬೆಳೆದು, ವಿವಾಹವಾದವರು ನಮ್ಮ ಅಕ್ಕ ಪಕ್ಕದಲ್ಲಿಯೇ ಕಾಣಸಿಗುತ್ತಾರೆ.

ಮೊಗ್ಗಿನ ಮನಸ್ಸು ಚಿತ್ರದಲ್ಲಿ ವಿದ್ಯಾರ್ಥಿನಿಗೆ ದಿನವೂ ಪಾಠ ಮಾಡುವ ಶಿಕ್ಷಕನಲ್ಲೇ ಆಕರ್ಷಣೆ ಉಂಟಾಗುತ್ತದೆ. ಇದನ್ನರಿತ ಶಿಕ್ಷಕ ತಿಳಿಹೇಳಿದ ಮೇಲೆ ಪ್ರೀತಿ ಬೇರೆಡೆ ತಿರುಗುತ್ತದೆ. ಈ ಕಥೆಯನ್ನು ನೆನಪಿಸಿದ್ದು ಬೇರಾವ ಕಾರಣಕ್ಕಲ್ಲ. ಪಾಕಿಸ್ತಾನದಲ್ಲಿ 20 ವರ್ಷದ ವಿದ್ಯಾರ್ಥಿನಿಯೊಬ್ಬಳು ತನಗೆ ಪಾಠ ಮಾಡಿದ ಶಿಕ್ಷಕನನ್ನು ಪ್ರೀತಿಸಿ, 32 ವರ್ಷ ಅಂತರವಿದ್ದರೂ ವಿವಾಹವಾಗಿದ್ದಾಳೆ. ಈ ಮದುವೆಯು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸುದ್ದಿಯಲ್ಲಿದೆ.

ಜೋಯಾ ನೂರ್ ಇವಳಿಗೆ 20 ವರ್ಷಗಳು ತುಂಬಿದೆ, ಬಿ.ಕಾಂ. ಪದವಿಯನ್ನು ಓದುತ್ತಿದ್ದಳು. 52 ವರ್ಷದ ಸಾಜಿದ್ ಅಲಿ ಎಂಬುವವರು ಅವಳ ಕಾಲೇಜಿನಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರು ಪಾಠ ಕಲಿಸುವ ವಿಧಾನ, ಕಣ್ಣೋಟಗಳಿಗೆ ಮನಸೋತ ಜೋಯಾ ನೂರ್ ಪ್ರೀತಿಸಲು ಪ್ರಾರಂಭಿಸಿದಳು. ಜೋಯಾ ತನ್ನ ಪ್ರೇಮದ ಕತೆಯನ್ನು ಸಾಜಿದ್ ಅಲಿ ಅವರಲ್ಲಿ ಹಂಚಿಕೊಂಡಳು. ಮೊದಮೊದಲು ಕಡೆಗಣಿಸುತ್ತಿದ್ದ ಸಾಜಿದ್ ನಂತರ ವಯಸ್ಸಿನ ಅಂತರದ ಬಗೆಗೆ ಯೋಚಿಸಲು ವಾರದ ಸಮಯಾವಕಾಶ ಕೇಳಿದರು. ಸಾಜಿದ್ ಕೂಡ ಅವಳನ್ನು ಮನಸಾರೆ ಪ್ರೀತಿಸಿಯೇ ಬಿಟ್ಟರು.

ಈ ಪ್ರೇಮಕಥೆಯನ್ನು ಮನೆಯವರಲ್ಲಿ ಹೇಳಿಕೊಂಡಾಗ ಕುಟುಂಬಸ್ಥರಿಂದ, ಸಂಬಂಧಿಕರಿಂದ ತೀರಾ ವಿರೋಧ ವ್ಯಕ್ತವಾಯಿತಂತೆ. “ಅವರು ನನ್ನ ಕಾಲೇಜಿನ ಅತ್ಯುತ್ತಮ ಶಿಕ್ಷಕರು. ವಿವರಿಸುವ ವಿಧಾನವೇ ನಾನು ನೆಚ್ಚಿದ ಗುಣ. ಅವರ ವ್ಯಕ್ತಿತ್ವಕ್ಕೆ ನಾನೊಬ್ಬ ಅಭಿಮಾನಿ” ಎನ್ನುವ ನೂರ್ ಜೊತೆಗೆ “ಅವಳ ಉತ್ತಮ ಆಹಾರ ತಯಾರಿಕೆ, ಕಚೇರಿಯಲ್ಲಿನ ಅವಳ ಕೈಯಿಂದ ಮಾಡಿದ ಚಹಾ ನನ್ನ ಮನಗೆದ್ದಿದೆ” ಎನ್ನುವ ಸಾಜಿದ್ ರ ವಿವಾಹವು ಕೋಪಗೊಂಡವರ ಮಧ್ಯೆಯೇ ನೆರವೇರಿದೆಯಂತೆ.

ಈ ದಂಪತಿಗಳ ಸಂದರ್ಶನದ ವೀಡಿಯೊ ನೋಡಿ ಅಭಿನಂದಿಸಿ, ಶುಭ ಹಾರೈಸಿದವರೊಂದಿಗೆ, ‘ಪವಿತ್ರವಾದ ಗುರು ಶಿಷ್ಯರ ಸಂಬಂಧವನ್ನು ಈ ರೀತಿ ನೋಡಿ ಬೇಸರಗೊಂಡವರು ಇದ್ದಾ ರಂತೆ.

Leave a Comment

error: Content is protected !!