78 ವರ್ಷದ ವೃದ್ಧನನ್ನು ಪ್ರೀತಿಸಿ ಮದುವೆಯಾದ 18ರ ಹುಡುಗಿ. ಇಬ್ಬರಿಗೂ ಇದೆ ಮೊದಲ ಪ್ರೇಮ

ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತಂತೆ. ಅದಕ್ಕಾಗಿ ಭೂಮಿಯ ಮೇಲೆ ಮದುವೆಯ ಸಂದರ್ಭದಲ್ಲಿ, ಸೌಂದರ್ಯ, ಸೌಕರ್ಯ, ಸದ್ಗುಣಗಳಿದ್ದರೂ ರಿಜೆಕ್ಟ್ ಆಗುವುದುಂಟು. ಇನ್ನೂ ಕೆಲವೊಮ್ಮೆ ವಧು-ವರರು ಒಪ್ಪಿಗೆ ಸೂಚಿಸಿ ಮದುವೆಯ ತಯಾರಿಯಾದ ನಂತರ ಸಂಭಂದ ಮುರಿದುಬೀಳುವುದುಂಟು. ಹಲವು ವರ್ಷಗಳಿಂದ ಪ್ರೀತಿಸಿದವರು ಕೂಡ ಬೇರೆ ಬೇರೆಯವರನ್ನು ಮದುವೆಯಾದದ್ದುಂಟು. ಹಣೆಯಲ್ಲಿ ಯಾರ ಹೆಸರು ಬರೆದಿರುತ್ತೋ ಅವರಲ್ಲಿಯೇ ಸಂಬಂಧಗಳು ಹೋಗಿ ಕೂಡುತ್ತಂತೆ.

ಶಾಲಾ ಕಾಲೇಜುಗಳಿಗೆ ಹೋಗುವಾಗಲೇ ಪ್ರೀತಿ ಚಿಗುರೊಡೆಯುವುದು 21ನೇ ಶತಮಾನದಲ್ಲಿ ಹೊಸ ವಿಚಾರವೇನಲ್ಲ. ಹದಿಹರೆಯದ ವಯಸ್ಸಿನಲ್ಲಿಯೇ, ಮುಂದೆ ಇವರೇ ನಮಗೆ ಸರಿಯಾದ ಜೋಡಿ ಎಂದು ಯೋಚಿಸಿ, ಪ್ರೀತಿಸಿ ಮದುವೆಯಾದವರು ತುಂಬಾ ಮಂದಿ ಇದ್ದಾರೆ. ಇವರು ಹೆಚ್ಚಾಗಿ ಸಮವಯಸ್ಕರು ಅಥವಾ ಎರಡರಿಂದ ಮೂರು ವರ್ಷ ಅಂತರವಿರುವವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು ಕೆಲವೊಮ್ಮೆ ಕುಟುಂಬಸ್ಥರ ಒತ್ತಾಯದಿಂದಲೋ ಅಥವಾ ಯಾವುದಾದರೂ ಸಂಕಷ್ಟಕ್ಕೆ ಸಿಲುಕಿಯೋ, ಬ್ಯುಸಿನೆಸ್ ನ ಒಪ್ಪಂದದ ಮೇಲೆಯೋ, ತಮ್ಮ ವಯಸ್ಸಿಗಿಂತ ಬಹಳ ಅಂತರವಿರುವ ವಧು ಅಥವಾ ವರನನ್ನು ವರಿಸಿದವರುಂಟು.

ಇಲ್ಲೊಂದು ಮದುವೆಯ ವಿಶೇಷತೆ ಏನೆಂದರೆ 18 ವಯಸ್ಸಿನ ಹುಡುಗಿ 78 ವರ್ಷದ ವೃದ್ಧನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಯಾವ ಒತ್ತಾಯ ಅಥವಾ ಸಂಕಷ್ಟಕ್ಕೆ ಸಿಲುಕಿ ನಡೆದ ಮದುವೆಯಲ್ಲ ಇದು. ಒಬ್ಬರನ್ನೊಬ್ಬರು ಒಪ್ಪಿಯೇ ಸಂಭ್ರಮದಿಂದಾದ ಮದುವೆ. ಹುಡುಗಿಯು ಕಲಿಯುತ್ತಿರುವಾಗಲೇ ಪ್ರಾರಂಭವಾದ ಪ್ರೇಮ ಕಥೆ. ಹುಡುಗಿಗೆ 15ರ ಪ್ರಾಯ. ಅದಾಗಲೇ ಆತನಿಗೆ 75 ವರ್ಷ. ಫಿಲಿಫೈನ್ಸ್ ನ ಕಂಗಯಾನ್ ಪ್ರಾಂತ್ಯದಲ್ಲಿ ನಡೆದ ಭರ್ಜರಿ ಔತಣಕೂಟವೊಂದರಲ್ಲಿ ಅವರಿಬ್ಬರ ಮೊದಲ ಭೇಟಿ. ಹುಡುಗಿಗೆ ವೃದ್ಧನಲ್ಲಿ ಆಕರ್ಷಣೆ. ತನ್ನ 75ರ ವರ್ಷದವರೆಗೂ ಯಾರೊಂದಿಗೂ ಸಂಬಂಧದ ಬಗ್ಗೆ ಯೋಚಿಸದ, ಕೃಷಿಯಲ್ಲಿ ನಿರತನಾಗಿ ಆಗ ತಾನೆ ಕೆಲಸವನ್ನೆಲ್ಲ ಬಿಟ್ಟು ವೃದ್ಧಾಪ್ಯವನ್ನು ಅನುಭವಿಸಬೇಕಾಗಿದ್ದ ಆತನಿಗೆ ಅವಳ ಪ್ರೀತಿಯಲ್ಲಿಯೇ ಸಮಾಧಾನ. ಮೂರು ವರ್ಷದ ಡೇಟಿಂಗ್ ನ ನಂತರ ಫಿಲಿಫೈನ್ ಸಿಟಿಯಲ್ಲಿ ಇವರಿಬ್ಬರು ಮನೆಯ ಸದಸ್ಯರ ಒಪ್ಪಿಗೆಯ ಮೇರೆಗೆ ಆಗಸ್ಟ್ 25ರಂದು ಮದುವೆಯಾಗಿದ್ದಾರೆ.

ವೃದ್ಧನ ಹೆಸರು ರಶೇಡ್ ಮಂಗಾಕೋಪ್. ಹುಡುಗಿಯ ಹೆಸರು ಹಲೀಮಾ ಅಬ್ದುಲ್ಲಾ. ಅರವತ್ತು ವರ್ಷದ ಅಂತರವಿದ್ದರೂ ಮನೆಯವರು ಇವರಿಬ್ಬರ ಪ್ರೀತಿಗೆ ಸೋತು, ಖುಷಿಯಿಂದಲೇ ಇಸ್ಲಾಮಿಕ್ ಸಾಂಪ್ರದಾಯದ ಪ್ರಕಾರ ಅದ್ದೂರಿ ಮದುವೆ ಮಾಡಿದ್ದಾರೆ. ರಶೇಡ್ ಮಂಗಾಕೋಪ್ ಅವರ ಅಣ್ಣನ ಮಗ ಬೆನ್ ‘ಆ ಹುಡುಗಿಯೇ ನನ್ನ ಚಿಕ್ಕಪ್ಪನನ್ನು ಮೊದಲು ಪ್ರೀತಿಸಿದ್ದು. 75ರ ವರ್ಷದವರೆಗೂ ಯಾವುದೇ ಪ್ರೇಮದ ಸವಿ ಉಂಡವರಲ್ಲ ಅವರು. ಇಲ್ಲಿಯವರೆಗೆ ಮದುವೆಯಾಗಿರಲಿಲ್ಲ. ರೈತಾಪಿ ಕೆಲಸವನ್ನು ಮಾಡಿಕೊಂಡಿದ್ದರು. ಹಲೀಮಾಳೆ ಅವರ ಮೊದಲ ಸಂಗಾತಿ’ ಎಂದಿದ್ದಾರೆ. ರಶೇಡ್ ಮಂಗಾಕೋಪ್ ಮತ್ತು ಹಲೀಮಾ ಸದ್ಯ ಕಾರ್ಮೆನ್ ಪಟ್ಟಣದ ಹೊಸ ಮನೆಯಲ್ಲಿ ನವ ಜೀವನ ನಡೆಸುತ್ತಿದ್ದಾರೆ.

Leave a Comment

error: Content is protected !!