ಈ ಏಳು ಗ್ರಾಮಗಳಲ್ಲಿ 9 ವರ್ಷಗಳ ನಂತರ ದೀಪಾವಳಿ ಆಚರಣೆ..!! ಇದು ಹೇಗೆ ಸಾಧ್ಯ ಗೊತ್ತಾ

ಪ್ರದೇಶದಿಂದ ಪ್ರದೇಶಕ್ಕೆ ಹಬ್ಬಗಳ ಆಚರಣೆಯ, ಆ ಆಚರಣೆಗಳ ಹಿಂದಿನ ಕಥೆ ಎಲ್ಲವೂ ವಿಭಿನ್ನವಾಗಿರುತ್ತವೆ. ಪೂರ್ವಜರು ಯಾವೊಂದು ಹಬ್ಬ ಹರಿದಿನಗಳ ಆಚರಣೆಯನ್ನು ಕಾರಣವಿಲ್ಲದೆ, ಅರ್ಥವಿಲ್ಲದೆ ಮಾಡಿರಲಾರರು. ಹಿನ್ನೆಲೆಯನ್ನು ಹಿರಿಯರಿಂದ, ತಿಳಿದವರಿಂದ ಕೇಳಿದಾಗ ಮಾತ್ರ ಬಲವಾದ ನಂಬಿಕೆಗಳು ಮೂಡುತ್ತದೆ. ಪ್ರತಿ ಗಲ್ಲಿ ಗಲ್ಲಿಯಲ್ಲಿನ ದೇವಾಲಯಗಳು ಐತಿಹಾಸಿಕ ಮಂದಿರಗಳು ಒಂದೊಂದು ಕಥೆಯನ್ನು ಹೇಳುತ್ತವೆ ಅಂತೆಯೇ ಒಂದು ಪ್ರದೇಶದ ಜನರ ಆಚಾರ, ವಿಚಾರ, ಆಚರಣೆಗಳಿಗೊಂದು ಬಲವಾದ ಕಾರಣವಿರುತ್ತದೆ.

7 ಗ್ರಾಮಗಳಲ್ಲಿ ದೀಪಾವಳಿ ಹಬ್ಬವನ್ನು ಬುಧವಾರ ಬಂದರೆ ಮಾತ್ರ ಆಚರಿಸಲಾಗುತ್ತಂತೆ, ಸುಮಾರು ಕಳೆದ 9 ವರ್ಷ ಗಳಿಂದ ಈ 7 ಹಳ್ಳಿ ಗಳಲ್ಲಿ ದೀಪಾವಳಿ ಹಬ್ಬವನ್ನು ಆಚರಣೆ ಮಾಡಿಲ್ಲ. ಬುಧವಾರ ಬಾರದಿದ್ದಲ್ಲಿ ಮುಂಬರುವ ಬುಧವಾರದವರೆಗೂ ಕಾದು ಹಬ್ಬವನ್ನು ಆಚರಿಸುತ್ತಾರಂತೆ. ಹೌದು. ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ನೇನೇಕಟ್ಟೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಸೇರಿದ ಏಳು ಹಳ್ಳಿಗಳಲ್ಲಿ ಈ ರೀತಿಯ ಪದ್ಧತಿ ಇದೆ. ನಲ್ಲೂರು, ನೇನೇಕಟ್ಟೆ, ಮಾಡ್ರಹಳ್ಳಿ, ಮಳವಳ್ಳಿ, ವೀರನಪುರ, ಬನ್ನಿತಾಳಪುರ ಮತ್ತು ಇಂಗಲವಾಡಿ ಗ್ರಾಮಗಳ ಜನರು ಈ ಪದ್ಧತಿಯನ್ನು ಹಲವಾರು ವರುಷಗಳಿಂದ ನಡೆಸಿಕೊಂಡು ಬಂದಿದ್ದಾರೆ.

ದೀಪಾವಳಿ ಹಬ್ಬದಂದು ದನ ಕರುಗಳ ಮೈ ತೊಳೆಸಿ, ಬಣ್ಣ ಹಚ್ಚಿ, ವ್ಯವಸಾಯ ಕಾರ್ಯದಲ್ಲಿ ತೊಡಗುವ ಎತ್ತುಗಳ ಕೋಡಿಗೆ ಬಣ್ಣ ಬಣ್ಣದ ರಿಬ್ಬನ್ ಕಟ್ಟಿ, ವಿಶೇಷ ತಿನಿಸುಗಳನ್ನು ಅವಕ್ಕಾಗಿಯೇ ಅರ್ಪಿಸಿ, ಪೂಜಿಸಿ ಸಂಭ್ರಮಿಸುತ್ತಾರೆ. ದೀಪಾವಳಿ ಹಬ್ಬದಂದೆ ಈ ಹಳ್ಳಿಗಳಲ್ಲಿ ಎತ್ತುಗಳು ಸಾವನ್ನಪ್ಪಿ ನೋವು ಉಂಟಾಯಿತಂತೆ. ಇದರಿಂದ ಹಳ್ಳಿಗರೆಲ್ಲ ಒಟ್ಟು ಸೇರಿ ತಾವು ನಂಬಿದ ಸ್ವಾಮೀಜಿಗಳೊಬ್ಬರಲ್ಲಿ ಕಷ್ಟ ಹೇಳಿಕೊಂಡರಂತೆ. ಅದಕ್ಕವರು ‘ಬುಧವಾರವೇ ಆಚರಣೆಗೆ ಸೂಕ್ತ’ ಎಂದರಂತೆ. ಅಂದಿನಿಂದಲೂ ಬುಧವಾರವೇ ದೀಪಾವಳಿ ಹಬ್ಬವನ್ನು ಆಚರಿಸುವ ಸಾಂಪ್ರದಾಯ ಪ್ರಾರಂಭವಾಯಿತಂತೆ.

ಇನ್ನೊಂದು ಕಥೆಯು ಈ ಕುರಿತಂತೆ ಕೇಳಿ ಬರುತ್ತದೆ. ಪಕ್ಕದ ಗ್ರಾಮದವರು ಮಾರಮ್ಮನ ಜಾತ್ರೆಯ ಆಚರಣೆಗೆ ಬಾಳೆ ಕಂದನ್ನು ತೆಗೆದುಕೊಂಡು ಹೋಗಲು ಬಂದಾಗ ಈ ಏಳು ಹಳ್ಳಿಗರು ಅವರನ್ನು ತಡೆಹಿಡಿದರಂತೆ. ಕೋಪಗೊಂಡ ದೇವರು ಶಾಪ ನೀಡಿದ ಕಾರಣ ಬುಧವಾರವೇ ಆಚರಿಸಲಾಗುತ್ತದೆ ಎನ್ನುತ್ತಾರೆ ಕೆಲವರು. ಅದೇನೇ ಇರಲಿ ಈ ಬಾರಿ ದೀಪಾವಳಿ ಹಬ್ಬವು ಬುಧವಾರವೇ ಬಂದಿದ್ದರಿಂದ ಈ ಹಳ್ಳಿಗರು ತುಂಬಾ ಸಂತಸದಿಂದ ಹಬ್ಬದ ತಯಾರಿ ನಡೆಸಿಕೊಂಡಿದ್ದಾರಂತೆ. ಅಕ್ಕಪಕ್ಕದ ಗ್ರಾಮಸ್ಥರ ಜೊತೆ ತಾವು ಒಂದುಗೂಡಿ ಹಬ್ಬವನ್ನು ಆಚರಿಸುತ್ತೇವೆ ಎಂಬ ಖುಷಿಯಂತೆ..

Leave a Comment

error: Content is protected !!