ಪುನೀತ್ ಬಗ್ಗೆ , ಯಶ್ ಹೇಳಿದ ಮಾತುಗಳನ್ನು ಕೇಳಿ ಕಣ್ಣೀರಿಟ್ಟ ಅಪ್ಪು ಮಗಳು ವಂದಿತಾ

ಪುನೀತ್ ರಾಜಕುಮಾರ್ ಅವರು ತಮ್ಮ ಚಿತ್ರಗಳ ಮೂಲಕ, ನಡೆದು ಬಂದಿರುವ ಹಾದಿಯಲ್ಲಿ ಸರಳತೆ, ಸೌಜನ್ಯಗಳನ್ನು ಸೂಸುವುದರ ಮೂಲಕ ಜೀವಂತವಾಗಿಯೇ ಉಳಿದಿದ್ದಾರೆ. ಅವರು ನಮ್ಮನ್ನು ಅಗಲಿ ಬಹಳ ದಿನಗಳಾದರೂ ನಂಬಲು ಇಂದಿಗೂ ಕಷ್ಟಸಾಧ್ಯ. ಅವರ ಬಹುದಿನದ ಕನಸು ‘ಗಂಧದಗುಡಿ’ಯ ಫ್ರೀ ರಿಲೀಸ್ ಇವೆಂಟ್ ಸಂಭ್ರಮದಿಂದ ನಡೆದಿದೆ.

ಬೆಂಗಳೂರಿನ ಅರಮನೆಯ ಮೈದಾನದಲ್ಲಿ ‘ಪುನೀತಪರ್ವ’ವು ಇವರ ನೆನಪುಗಳೊಂದಿಗೆ ನೆರವೇರಿದೆ. ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿರುವ ಕಲಾವಿದರು, ರಾಜಕೀಯ ವ್ಯಕ್ತಿಗಳು, ಅಪ್ಪು ಅವರ ಅಭಿಮಾನಿಗಳಿಂದ ಕೂಡಿದ ಈ ಕಾರ್ಯಕ್ರಮವು ಅಪ್ಪು ಅವರಿಗೂ ಖುಷಿ ತಂದಿರಬಹುದು. ವೇದಿಕೆಯಲ್ಲಿ ನಟ ನಟಿಯರ ಹಾಡು, ನೃತ್ಯ, ಮಾತು ಎಲ್ಲವೂ ಇತ್ತು. ರಾಕಿಂಗ್ ಸ್ಟಾರ್ ಯಶ್ ಅವರು ವೇದಿಕೆಯಲ್ಲಿ ಅಪ್ಪು ಅವರೊಂದಿಗಿನ ನೆನಪನ್ನು ಮೆಲುಕು ಹಾಕಿದ್ದು, ಅವರ ಗುಣವಂತಿಕೆಯನ್ನು ಹೊಗಳಿದ್ದರು. ಇದನ್ನು ಕೇಳುತ್ತಾ ಪುನೀತ್ ರಾಜಕುಮಾರ್ ಅವರ ಮಗಳು ವಂದಿತಾ ಕಣ್ಣಲ್ಲಿ ನೀರು ಹರಿಯಿತು.

“ಒಂದು ವರ್ಷದ ಹಿಂದೆ ಸುಮಾರು ಇದೇ ದಿನ ನಾನು, ಅಪ್ಪು ಸರ್ ಮತ್ತು ಶಿವಣ್ಣ ವೇದಿಕೆಯಲ್ಲಿ ಡಾನ್ಸ್ ಮಾಡಿದ್ವಿ. ಅದಿನ್ನು ನನ್ನ ತಲೆಯಲ್ಲಿ ಹಾಗೆ ಅಚ್ಚಾಗಿ ಉಳಿದಿದೆ. ಬಹಳ ದಿನಗಳ ನಂತರ ಸಿಕ್ಕ ನಾವು ತುಂಬಾನೇ ಮಾತನಾಡಿದ್ವಿ. ಅವರಲ್ಲಿರುವಂಥ ಹುಮ್ಮಸ್ಸು, ಉತ್ಸಾಹ ಎಂದಿಗೂ ಕಡಿಮೆಯಾಗದೆ, ನೋಡಿದಾಗಲೆಲ್ಲ ನನಗೂ ಜೋಶ್ ಬರುತ್ತಿತ್ತು. 2002ರಲ್ಲಿ ‘ಅವರಿವರನ್ನು ಗೆದ್ದರೆ ನೀನು ಅಜೇಯನಲ್ಲ; ತಾಕತ್ತು ಇದ್ದರೆ ನನ್ನನ್ನು ಗೆಲ್ಲು’ ಎನ್ನುತ್ತಾ ಎಂಟ್ರಿ ಕೊಟ್ಟವರು ಅವರು. ನನಗೆ ಏನು ಮಾತನಾಡಬೇಕೆಂದು ತೋಚುತ್ತಿಲ್ಲ. ಗುರಿ, ಸಾಧನೆ ಎನ್ನುತ್ತಾ ಓಡುತ್ತಿರುವ ನಮಗೆ ಬದುಕೇ ಕಳೆದು ಹೋದರೆ ಅದನ್ನು ಸ್ವೀಕರಿಸಲು ಅಸಾಧ್ಯ. ಅಭಿಮಾನಿಗಳು ಪ್ರೀತಿಯಿಂದ ಪುನೀತ್ ಅವರನ್ನು ಜೀವಂತ ಇರಿಸಿರುವುದು ಉದಾಹರಣೆಯಾಗಿ ಪ್ರತಿ ಕಲಾವಿದನಿಗೂ ಪ್ರೋತ್ಸಾಹ ಕೊಡುತ್ತದೆ. ಇಡೀ ಕರ್ನಾಟಕವೇ ಅಪ್ಪು ಅವರನ್ನು ತಮ್ಮ ಮಗ ಎಂದು ಹೆಮ್ಮೆಯಿಂದ ಹೇಳುತ್ತಿದೆ. ಪ್ರೀತಿಯಿಂದ ಬೆಳೆದ ಅಪ್ಪು ಅವರು ತಂದೆಗೆ ಒಳ್ಳೆಯ ಮಗನಾಗಿ, ಅಣ್ಣಂದಿರಿಗೆ ಮುದ್ದಿನ ತಮ್ಮನಾಗಿ, ಸ್ನೇಹಿತರಿಗೆ ಶಕ್ತಿಯಾಗಿ ಮಾದರಿಯಾಗಿದ್ದಾರೆ. ಕರ್ನಾಟಕ ಸಂಸ್ಕೃತಿಯ ಸಂಕೇತವಾಗಿ ಉಳಿದಿದ್ದಾರೆ” ಎಂದು ರಾಕಿಂಗ್ ಸ್ಟಾರ್ ಯಶ್ ಅವರು ವೇದಿಕೆಯಲ್ಲಿ ಹೇಳಿದರು.

ಇವೆಲ್ಲವನ್ನೂ ಕೇಳುತ್ತಾ ಪುನೀತ್ ರಾಜಕುಮಾರ್ ಅವರ ಮಗಳು ವಂದಿತಾ ಭಾವುಕರಾದರು. ತಂದೆಯ ನೆನಪುಗಳೊಂದಿಗೆ ಕಣ್ಣಲ್ಲಿ ನೀರು ತುಂಬಿಕೊಂಡರು. ಕೆಜಿಎಫ್ ಖ್ಯಾತಿಯ ಯಶ್ ಅವರು ನಾಡಿನ ಜನತೆಗೆ ಸಹಾಯವಾಗುವಂತೆ ಯಶೋಮಾರ್ಗ ಫೌಂಡೇಶನ್ ನ ಮೂಲಕ ಕರ್ನಾಟಕದ ಅಗತ್ಯತೆಯ ಜಿಲ್ಲೆಗಳಲ್ಲಿ ಅಪ್ಪು ಅವರ ಹೆಸರಲ್ಲಿ ಆಂಬುಲೆನ್ಸ್ ಗಳನ್ನು ನೀಡುವುದಾಗಿ ಹೇಳಿದರು. ಇದನ್ನು ಕೇಳಿದ ಅಭಿಮಾನಿಗಳು ಸಂತಸಗೊಂಡಿದ್ದಾರೆ.

Leave a Comment

error: Content is protected !!